ಶಿರಸಿಯ ದೊಡ್ನಳ್ಳಿ ಬಳಿಯ ಬಾವಿಯೊಂದರಲ್ಲಿ ಬಗೆದಷ್ಟು ಆಳಕ್ಕೆ ಎಣ್ಣೆ ಬರುತ್ತಿದೆ. ಮೊನ್ನೆ-ಮೊನ್ನೆಯವರೆಗೂ ನೀರು ಕೊಡುತ್ತಿದ್ದ ಬಾವಿಯಲ್ಲಿ ಎಣ್ಣೆ ಬರುವುದನ್ನು ನೋಡಿ ಓಂಕಾರ ಕಾಲೋನಿಯ ಜನ ಕಂಗಾಲಾಗಿದ್ದಾರೆ.
ಓ0ಕಾರ ಕಾಲೋನಿಯ ಮೊದಲನೇ ತಿರುವಿನಲ್ಲಿರುವ ಆರು ಮನೆಗಳಿಗೆ ಅಲ್ಲಿರುವ ಬಾವಿಯೇ ಆಧಾರ. ಆದರೆ, ಆ ಬಾವಿಯಲ್ಲಿ ಸದ್ಯ ಕುಡಿಯಲು ಯೋಗ್ಯವಾದ ನೀರು ಸಿಗುತ್ತಿಲ್ಲ. ಬಾವಿಯಿಂದ ನೀರು ಸೇದಿದ ಪ್ರತಿಯೊಬ್ಬರಿಗೂ ನೀರಿನ ಜೊತೆ ಎಣ್ಣೆಯೂ ಸಿಗುತ್ತಿದೆ. ಆ ಎಣ್ಣೆ ಅತ್ಯಂತ ಕೆಟ್ಟ ವಾಸನೆಯಿಂದ ಕೂಡಿದ್ದು, ನೀರು ಸಹ ಕಲುಷಿತವಾಗಿದೆ. ಕೈ-ಕಾಲು ತೊಳೆಯಲು ಸಹ ನೀರು ಬಳಕೆಗೆ ಯೋಗ್ಯವಾಗಿಲ್ಲ.
ಮೂರು ದಿನಗಳ ಹಿಂದೆ ಎಲ್ಲವೂ ಸರಿಯಾಗಿಯೇ ಇತ್ತು. ಮೊನ್ನೆಯಿಂದ ನೀರು ಹಂತ ಹಂತವಾಗಿ ಕಲುಷಿತಗೊಂಡಿದ್ದು, ಈ ದಿನ ಅದು ಇನ್ನಷ್ಟು ಹಾಳಾಗಿದೆ. ಹೀಗಾಗಿ ಅಲ್ಲಿನವರಿಗೆ ಸದ್ಯ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. `ಬಾವಿಯಲ್ಲಿ ನೀರಿನ ಜೊತೆ ಎಣ್ಣೆ ಬರುತ್ತಿದ್ದು, ಅದಕ್ಕೆ ಏನು ಕಾರಣ ಎಂದು ಗೊತ್ತಾಗಿಲ್ಲ. ಸಮಸ್ಯೆ ಬಗೆಹರಿಯದೇ ಇದ್ದರೆ ಇನ್ನಷ್ಟು ಸಂಕಷ್ಟ ಖಚಿತ’ ಎಂದು ಅಲ್ಲಿನ ಗೋಪಾಲಕೃಷ್ಣ ಭಟ್ಟ ಅವರು ಹೇಳಿದ್ದಾರೆ.
ಸಮೀಪದಲ್ಲಿ ಎಸಳೆ ಗ್ರಿಡ್ ಇದ್ದು, ಗ್ರಿಡ್‌ನ ಟ್ರಾನ್ಸ್ಫಾರ್ಮರ್‌ಗಳಲ್ಲಿ ಬಳಸುವ ಆಯಿಲ್ ಸೋರಿಕೆಯಾಗಿ ಅಂತರ್ಜಲದ ಮೂಲಕ ಬಾವಿಗಳಿಗೆ ಸೇರಿರುವ ಶಂಕೆ ಶುರುವಾಗಿದೆ. ದೊಡ್ನಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿ ಶೆಟ್ಟಿ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಜೊತೆ ಸ್ಥಲಕ್ಕೆ ಭೇಟಿ ನೀಡಿದ್ದಾರೆ. ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜುಕೃಷ್ಣ ಬಿಳಗಿ ಅವರನ್ನೂ ಸ್ಥಳಕ್ಕೆ ಕರೆಸಿ ಗ್ರಿಡ್‌ನ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದಾರೆ. ಆದರೆ, ಈ ವೇಳೆ ಗ್ರಿಡ್‌ನಿಂದ ಯಾವುದೇ ಆಯಿಲ್ ಸೋರಿಕೆಯಾಗಿದ್ದು ಕಾಣಿಸಿಲ್ಲ.
ಕಲುಷಿತಗೊಂಡಿರುವ ಬಾವಿಗಳ ನೀರಿನ ಮಾದರಿಯನ್ನು ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಸಂಗ್ರಹಿಸಿ ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದೆ. ಈ ಪರೀಕ್ಷೆಯಲ್ಲಿ ನೀರು ಕುಡಿಯಲು ಯೋಗ್ಯವಲ್ಲ ಎಂದು ಬಂದಿದೆ. ನೀರಿಗೆ ಎಣ್ಣೆ ಸೇರಿದ್ದು ಹೇಗೆ? ಎಂದು ಮಾತ್ರ ಗೊತ್ತಾಗಿಲ್ಲ.