ಫೋನ್ ಖರೀದಿ ನಂತರ ಹಣ ಕೊಡದೇ ಪರಾರಿಯಾಗಿದ್ದ ಕಿರಣಕುಮಾರ ಎಂಬಾತರನ್ನು ಕುಮಟಾ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಕಿರಣಕುಮಾರ ಪುಟ್ಟರಾಜು ಅವರ ಬಳಿಯಿದ್ದ ಕಾರನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಕುಮಟಾದ ಹೊಸ ಬಸ್ ನಿಲ್ದಾಣದ ಸಮೀಪದ ಮಾತೋಶ್ರೀ ಏಜೆನ್ಸಿಸ್ ಮೊಬೈಲ್ ಮಳಿಗೆಗೆ ಸೆಪ್ಟೆಂಬರ್ 10ರಂದು ಕಿರಣಕುಮಾರ ಅವರು ಬಂದಿದ್ದರು. 16,700ರೂಪಾಯಿಯ ರಿಯಲ್ಮಿ ಸಿ-100 ಎಕ್ಸ್ ಮೊಬೈಲ್ ನೋಡಿದ ಅವರು ಅದನ್ನು ಖರೀದಿಸುವುದಾಗಿ ಹೇಳಿದ್ದರು. ಅದಾದ ನಂತರ ಫೋನ್ ಫೇ ಮೂಲಕ ಹಣ ವರ್ಗಾಯಿಸಿರುವುದಾಗಿ ತಿಳಿಸಿ ಮೊಬೈಲ್ಪಡೆದು ಪರಾರಿಯಾಗಿದ್ದರು. ಆದರೆ, ಆ ಹಣ ಜಮಾ ಆಗಿರಲಿಲ್ಲ.
ಅಂಗಡಿ ಮಾಲಕರ ದೂರಿನ ಪ್ರಕಾರ ಕೇಸು ದಾಖಲಿಸಿದ ಪೊಲೀಸರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಲಿಂಗಮ್ಮನಹಳ್ಳಿ ಗ್ರಾಮದ ಕಿರಣಕುಮಾರ ಪಿ ಪುಟ್ಟರಾಜು ಅವರನ್ನು ಬಂಧಿಸಿದರು. ಬೆಂಗಳೂರಿನ ಮಾಗಡಿ ರಸ್ತೆ ಬಳಿ ಅವರನ್ನು ಅಡ್ಡಹಾಕಿದ ಪೊಲೀಸರು ವಂಚನೆ ವೇಳೆ ಬಳಸಿದ್ದ ಫೋರ್ಡ್ ಐಕಾನ್ ಕಾರನ್ನು ಜಪ್ತು ಮಾಡಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಡಿವೈಎಸ್ಪಿ ಗಿರೀಶ್ ಎಸ್ ವಿ ಅವರ ಮಾರ್ಗದರ್ಶನದಲ್ಲಿ ಕುಮಟಾ ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ ಅವರು ಈ ಕಾರ್ಯಾಚರಣೆ ನಡೆಸಿದರು.
ಪಿಸೈ ವಿಠಲ ಮಲವಡಕರ, ಸಾವಿತ್ರಿ ನಾಯಕ ಅವರ ಜೊತೆ ಪೊಲೀಸ್ ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಕಿರಣ ನಾಯ್ಕ ಹಾಗೂ ಸುಬ್ರಹ್ಮಣ್ಯ ಹೆಗಡೆ ಅವರು ಶ್ರಮಿಸಿದ್ದರು