ನೆರೆಮನೆಯವರು ನೆಟ್ಟ ತೆಂಗಿನ ಮರ ನೆಮ್ಮದಿ ಕೆಡಿಸುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ಪ್ರಜಾ ಸೇವೆ ಆಂದೋಲನದಲ್ಲಿ ದೂರಿದ್ದಾರೆ. `ಆ ತೆಂಗಿನ ಮರದಿಂದ ನಮ್ಮ ಮನೆಗೆ ಹಾನಿಯಾಗುತ್ತಿದೆ. ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ’ ಎಂದವರು ಅಳಲು ತೋಡಿಕೊಂಡಿದ್ದಾರೆ. `ಆ ಮರ ತೆರವು ಮಾಡಿ, ಇಲ್ಲವೇ ನಮಗೆ ದಯಾಮರಣ ನೀಡಿ’ ಎಂದು ಅವರು ಮನವಿ ಸಲ್ಲಿಸಿದ್ದಾರೆ!
ಸಾಮಾನ್ಯವಾಗಿ ರಸ್ತೆ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಪ್ರಜಾ ಸೇವೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣ, ಹಕ್ಕುಪತ್ರದ ಜೊತೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆಯೂ ಮನವಿಗಳು ಬರುತ್ತವೆ. ಆದರೆ, ಈ ದಿನ ಶಿರಸಿಯಲ್ಲಿ ನಡೆದ ಪ್ರಜಾ ಸೇವೆ ಆಂದೋಲನದಲ್ಲಿ ಸಚಿವ ಲಕ್ಷಣ ಸವದಿ ಅವರಿಗೆ ವಿಚಿತ್ರ ಮನವಿಯೊಂದು ಬಂದಿತು. `ಪಕ್ಕದ ಮನೆಯ ತೆಂಗಿನ ಮರಗಳಿಂದ ತಮ್ಮ ಮನೆಗೆ ಹಾನಿಯಾಗಿದೆ. ಆ ಮರದಿಂದ ವೈಯಕ್ತಿಕವಾಗಿಯೂ ತೊಂದರೆಯಾಗುತ್ತಿದೆ. ಇದರಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಒಬ್ಬರು ವಿವರಿಸಿದರು. ಮನವಿಯನ್ನು ಆಲಿಸಿದ ಅಧಿಕಾರಿಗಳು ಮೂರು ದಿನಗಳ ಒಳಗೆ ಮರಗಳನ್ನು ಕಟಾವು ಮಾಡುವುದಾಗಿ ತಿಳಿಸಿ ಸಮಸ್ಯೆ ಬಗೆಹರಿಸಿದರು.
ಪಂಚಾಯತ್ ರಾಜ್ ಎಂಜಿನಿಯರಿAಗ್ ಇಲಾಖೆಗೆ ಸಂಬAಧಿಸಿದ 57, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 49, ಶಿರಸಿ ನಗರಸಭೆಯ 20, ಹೆಸ್ಕಾಂನ 16, ಅರಣ್ಯ ಇಲಾಖೆಯ 13, ಆರೋಗ್ಯ ಇಲಾಖೆಯ 2, ರಸ್ತೆ ಸಾರಿಗೆ ಸಂಸ್ಥೆಯ 7, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 15 ಹಾಗೂ ಕಂದಾಯ ಇಲಾಖೆಯ 37 ಅರ್ಜಿಗಳು ಚರ್ಚೆಗೆ ಬಂದವು. ಹಲವು ವರ್ಷಗಳಿಂದ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ತೊಂದರೆ ಅನುಭವಿಸುತ್ತಿದ್ದ ಮಹಿಳೆಯೊಬ್ಬರ ಸಮಸ್ಯೆಯನ್ನು ಒಂದು ವಾರದೊಳಗೆ ಪರಿಹರಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸಚಿವರು ಪಂಚಾಯತ್ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಹಿತ್ಲಳ್ಳಿಯ ಗಂಗಾಧರ ದೇವಪ್ಪ ಆಚಾರಿ ಅವರಿಗೆ ಯುಡಿಐಡಿ ಕಾರ್ಡ್ ನೀಡಲು ವಿಳಂಬ ಮಾಡುತ್ತಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಕ್ಷಣ ಕಾರ್ಡ್ ವಿತರಿಸುವಂತೆ ಸೂಚಿಸಿದರು. ಕಾರ್ಡ್ ದೊರೆತ ಕೂಡಲೇ ತ್ರಿಚಕ್ರ ಮೋಟಾರ್ ಸೈಕಲ್ ನೀಡುವುದಾಗಿ ಶಾಸಕ ಶಿವರಾಮ ಹೆಬ್ಬಾರ್ ಭರವಸೆ ನೀಡಿದರು.
ವನ್ಯಜೀವಿಗಳಿಂದ ಉಂಟಾಗುವ ಹಾನಿಗೆ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಿಸಿರುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆಯೂ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷೆ ಸುಮಾ ಉಗ್ರಣಕಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ್, ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಉಪಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಕಾರವಾರ ಉಪವಿಭಾಗಾಧಿಕಾರಿ ರಮ್ಯಾ ಹಾಗೂ ಶಿರಸಿ ಉಪವಿಭಾಗಾಧಿಕಾರಿ ಚಂದ್ರಶೇಖರ ಅವರು ಇದ್ದರು.