ಕಲ್ಲೇಶ್ವರದ ಅರುಣಕುಮಾರ ಭಟ್ಟ ಅವರು ಮನೆಯಲ್ಲಿದ್ದಾಗ ಅದೇ ಭಾಗದ ಸತೀಶ ಭಟ್ಟ ಹಾಗೂ ನಿಶಾ ಭಟ್ಟ ಸೇರಿ ಅವರ ಮನೆಗೆ ಹೊರಗಡೆಯಿಂದ ಬೀಗ ಹಾಕಿದ್ದಾರೆ. ಜೊತೆಗೆ ರೌಡಿಗಳನ್ನು ಕರೆಯಿಸಿ ಹೊಡೆಸುವುದಾಗಿಯೂ ಸತೀಶ ಭಟ್ಟ ಹಾಗೂ ನಿಶಾ ಭಟ್ಟ ದಂಪತಿ ಅರುಣಕುಮಾರ ಭಟ್ಟ ಅವರ ಕುಟುಂಬಕ್ಕೆ ಬೆದರಿಕೆ ಒಡ್ಡಿದ್ದಾರೆ.
ಅಂಕೋಲಾದ ಹಳವಳ್ಳಿ ಬಳಿಯ ಕಲ್ಲೇಶ್ವರದಲ್ಲಿ ಅರುಣಕುಮಾರ ನರಸಿಂಹ ಭಟ್ಟ ಅವರು ವಾಸವಾಗಿದ್ದಾರೆ. ಅದೇ ಭಾಗದ ಕನಕನಳ್ಳಿಯಲ್ಲಿ ಸತೀಶ ನರಸಿಂಹ ಭಟ್ಟ ಹಾಗೂ ನಿಶಾ ಸತೀಶ ಭಟ್ಟ ದಂಪತಿ ವಾಸವಾಗಿದ್ದಾರೆ. ಅರುಣಕುಮಾರ ಭಟ್ಟ ಹಾಗೂ ಸತೀಶ ಭಟ್ಟ ಅವರ ನಡುವೆ ಮೊದಲಿನಿಂದಲೂ ಕುಟುಂಬ ಕಲಹ ನಡೆಯುತ್ತಿದೆ. ಈ ವಿಷಯವಾಗಿ 2024ರಲ್ಲಿಯೇ ಕೋರ್ಟು-ಕೇಸು-ಕಚೇರಿ ಅಲೆದಾಟ ನಡೆದಿದೆ. ಅದಾಗಿಯೂ ಅವರ ಕಲಹ ಮುಂದುವರೆದಿದ್ದು, ಸದ್ಯ ಅರುಣಕುಮಾರ ಭಟ್ಟ ಅವರನ್ನು ಅವರದ್ದೇ ಮನೆಯಲ್ಲಿ ಕೂಡಿಹಾಕುವುದರ ಮಟ್ಟಿಗೆ ಬೆಳೆದಿದೆ.
`ಕಳೆದ ಐದಾರು ವರ್ಷದಿಂದ ಸತೀಶ ಭಟ್ಟ ಹಾಗೂ ನಿಶಾ ಭಟ್ಟ ಅವರು ತಮಗೆ ತೊಂದರೆ ನೀಡುತ್ತಿದ್ದು, ರೌಡಿಗಳನ್ನು ಕರೆಯಿಸಿ ಹೊಡೆಸುವುದಗಿ ಹೇಳಿದ್ದಾರೆ’ ಎಂದು ಅರುಣಕುಮಾರ ಭಟ್ಟ ಅವರು ದೂರಿದ್ದಾರೆ. `ನವೆಂಬರ್ 6ರಂದು ಹಳವಳ್ಳಿಯ ಮನೆ ಬಳಿ ಬಂದು ಅವರಿಬ್ಬರು ಗಲಾಟೆ ಮಾಡಿದ್ದಾರೆ. ಅವರು ಬಾರದಂತೆ ತಡೆಯುಲು ನಾವು ಗೇಟಿಗೆ ಬೀಗ ಹಾಕಿದ್ದು, ಅದಾದ ನಂತರ ಅವರಿಬ್ಬರೂ ನಮ್ಮನ್ನು ಮನೆಯಲ್ಲಿ ಕೂಡಿಹಾಕಿ ಮತ್ತೊಂದು ಬೀಗ ಜಡಿದಿದ್ದಾರೆ’ ಎಂದವರು ಅಳಲು ತೋಡಿಕೊಂಡಿದ್ದಾರೆ.
`ರೌಡಿಗಳು ರೆಡಿ ಇದ್ದಾರೆ ಎನ್ನುವ ಮೂಲಕ ಮತ್ತೆ ಬೆದರಿಕೆ ಒಡ್ಡಿದ್ದಾರೆ. ತೋಟದ ಅಡಿಕೆ ಬೆಳೆ ಕೊಯ್ಯಲು ಬಿಟ್ಟಿಲ್ಲ. ಸತೀಶ ಭಟ್ಟ ಹಾಗೂ ನಿಶಾ ಭಟ್ಟ ಅವರು ಅದನ್ನು ಕದಿಯುವ ಹುನ್ನಾರ ನಡೆಸಿದ್ದಾರೆ’ ಎಂದು ಅರುಣಕುಮಾರ ಭಟ್ಟ ಅವರು ದೂರಿದ್ದಾರೆ. ಈ ವಿಷಯದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದಾರೆ.