ಕರ್ಕಿಯ ಸಾಕ್ಷಿ ನಾಯ್ಕ ಅವರು ಮೊಬೈಲಿನಲ್ಲಿ ಮಾತನಾಡುತ್ತ ಸ್ಕೂಟಿ ಓಡಿಸಿದ್ದು, ಆ ಸ್ಕೂಟಿ ವೃದ್ಧೆಯೊಬ್ಬರಿಗೆ ಗುದ್ದಿದೆ. ಅಪಘಾತದಲ್ಲಿ ಗಾಯಗೊಂಡ ಪ್ರಭಾತ ನಗರದ ಫಾತಿಮಾ ಲುವಿಸ್ ಅವರು ಆಸ್ಪತ್ರೆ ಸೇರಿದ್ದಾರೆ.
ಹೊನ್ನಾವರದ ಕರ್ಕಿಯಲ್ಲಿ ಸಾಕ್ಷಿ ಹರಿಶ್ಚಂದ್ರ ನಾಯ್ಕ ಅವರು ವಾಸವಾಗಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿ ಅವರು ಸ್ಕೂಟಿ ಓಡಿಸುತ್ತಾರೆ. ಮುಖ್ಯವಾಗಿ ಮೊಬೈಲಿನಲ್ಲಿ ಮಾತನಾಡುತ್ತಲೇ ಅವರು ಸ್ಕೂಟಿ ಓಡಿಸುವುದನ್ನು ರೂಢಿಸಿಕೊಂಡಿದ್ದಾರೆ. ಅದರ ಪರಿಣಾಮ ಬೇರೆಯವರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಹೊನ್ನಾವರದ ಪ್ರಭಾತನಗರದಲ್ಲಿ ಫಾತಿಮಾ ಬಸ್ತೇವ್ ಲುವಿಸ್ ಅವರು ವಾಸವಾಗಿದ್ದಾರೆ. 62 ವರ್ಷದ ಅವರು ನಡೆದು ಹೋಗುವಾಗ ಅವರಿಗೆ ಸಾಕ್ಷಿ ನಾಯ್ಕ ಅವರು ಸ್ಕೂಟಿ ಗುದ್ದಿದ್ದಾರೆ. ನವೆಂಬರ್ 4ರಂದು ಈ ಅಪಘಾತ ನಡೆದಿದ್ದು, ಅಪಘಾತ ನೋಡಿದ ಕೆಳಗಿನ ಇಡಗುಂಜಿಯ ಚಂದ್ರಕಾoತ ಗಣಪತಿ ನಾಯ್ಕ ಅವರು ಫಾತಿಮಾ ಲುವಿಸ್ ಅವರ ನೆರವಿಗೆ ಬಂದಿದ್ದಾರೆ. ಪ್ರಭಾತನಗರದ ಸೆಂಟ್ ಇಗ್ನೆಸಿಯಸ್ ಆಸ್ಪತ್ರೆ ಕ್ರಾಸಿನ ಬಳಿ ಇದ್ದ ಜನರು ಅಪಘಾತ ನೋಡಿ ವೃದ್ಧೆಗೆ ಸಹಾಯ ಮಾಡಿದ್ದಾರೆ.
ರಿಕ್ಷಾ ನಿಲ್ದಾಣದ ಕಡೆ ನಡೆದು ಹೋಗುತ್ತಿದ್ದ ಫಾತಿಮಾ ಲುವಿಸ್ ಅವರಿಗೆ ಸಾಕ್ಷಿ ನಾಯ್ಕ ಅವರು ಸ್ಕೂಟಿ ಗುದ್ದಿದ್ದಾರೆ. ನಂತರ ಅಲ್ಲಿದ್ದ ರಿಕ್ಷಾ ಮೂಲಕ ಫಾತಿಮಾ ಲುವಿಸ್ ಅವರನ್ನು ಅಲ್ಲಿದ್ದ ಜನ ರಿಕ್ಷಾ ಮಾಡಿಸಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗೋರುಸೊಪ್ಪದಿಂದ ಕವಲಕ್ಕಿ ಕಡೆ ಸಾಕ್ಷಿ ನಾಯ್ಕ ಅವರು ಜೋರಾಗಿ ಸ್ಕೂಟಿ ಓಡಿಸಿಕೊಂಡು ಬಂದಿದ್ದು, ಮೊಬೈಲಿನಲ್ಲಿ ಮಾತನಾಡುವಾಗಲೇ ಈ ಅಪಘಾತ ನಡೆದಿದೆ. ಫಾತಿಮಾ ಲುವಿಸ್ ಅವರ ತಲೆ ಹಾಗೂ ಕೈಗೆ ಗಾಯಗಳಾಗಿವೆ.
ಅಪಘಾತದ ನಂತರವೂ ಸಾಕ್ಷಿ ನಾಯ್ಕ ಅವರು ಗಾಯಾಳು ಫಾತಿಮಾ ಲುವಿಸ್ ಅವರಿಗೆ ನಿಂದಿಸಿದ ಬಗ್ಗೆ ಅಲ್ಲಿನವರು ದೂರಿದ್ದಾರೆ. `ವಯಸ್ಸಾದ ಮೇಲೆ ಮನೆಯಲ್ಲಿರಬೇಕು. ರಸ್ತೆಗೆ ಏಕೆ ಬರಬೇಕು?’ ಎಂದು ಸಾಕ್ಷಿ ನಾಯ್ಕ ಅವರು ವೃದ್ಧೆಯನ್ನು ದಬಾಯಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮೊಬೈಲ್’ನಲ್ಲಿ ಮಾತನಾಡುತ್ತ ವಾಹನ ಓಡಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.