ಕಳೆದ ಎರಡುವರೆ ವರ್ಷದಿಂದ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಕೆ ಲಕ್ಷ್ಮೀಪ್ರಿಯಾ ಅವರನ್ನು ಜನಶಕ್ತಿ ವೇದಿಕೆಯವರು ಸನ್ಮಾನಿಸಿ ಬೀಳ್ಕೊಟ್ಟಿದ್ದಾರೆ. ಈ ವೇಳೆ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬೋಯರ್ ಹರ್ಷಲ್ ನಾರಾಯಣರಾವ್ ಅವರನ್ನು ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ.
ಜನಶಕ್ತಿ ವೇದಿಕೆಯ ಜಿಲ್ಲಾಧ್ಯಕ್ಷ ಮಾಧವ ಬಿ ನಾಯಕ ಹಾಗೂ ವೇದಿಕೆಯ ಸದಸ್ಯರು ಕೆ ಲಕ್ಷ್ಮೀಪ್ರಿಯಾ ಅವರನ್ನು ಭೇಟಿ ಮಾಡಿದರು. ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿದರು. ನಂತರ ಪುಷ್ಪಗುಚ್ಛ ಹಾಗೂ ಹಣ್ಣು ಹಂಪಲುಗಳನ್ನು ನೀಡಿ ಗೌರವಿಸಿದರು. `ಅವರ ಮುಂದಿನ ಸೇವಾ ಬದುಕು ಸುಖಮಯವಾಗಿರಲಿ’ ಎಂದು ಶುಭ ಹಾರೈಸಿ ಬೀಳ್ಕೋಟ್ಟರು. `ಕೆ ಲಕ್ಷ್ಮೀಪ್ರಿಯಾ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುದೀರ್ಘ ಅವಧಿಯವರೆಗೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ತಮ್ಮದೇ ಆದ ಸೇವಾ ಛಾಪು ಮೂಡಿಸಿದ್ದಾರೆ. ಜಿಲ್ಲಾಡಳಿತದ ಜವಾಬ್ದಾರಿವಹಿಸಿಕೊಂಡ ಸಂದರ್ಭದಲ್ಲಿ ಹಲವು ಸವಾಲುಗಳು ಆಡಳಿತಾತ್ಮಕ ಒತ್ತಡಗಳು ಹಾಗೂ ಸಾರ್ವಜನಿಕರ ನಾನಾ ರೀತಿಯ ಸಮಸ್ಯೆ ಮತ್ತು ದೂರು ದುಮ್ಮಾನಗಳನ್ನು ಎದುರಿಸಬೇಕಾದ ಸಂದರ್ಭಗಳು ಎದುರಾಗಿದ್ದವು. ಆದರೂ ಯಾವುದಕ್ಕೂ ಎದೆಗುಂದದೆ ತಾಳ್ಮೆ ಮತ್ತು ಶಾಂತಚಿತ್ತದಿoದ ಸದಾ ಹಸನ್ಮುಖಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ’ ಎಂದು ಮಾಧವ ನಾಯಕ ಅವರು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಬೋಯರ್ ಹರ್ಷಲ್ ನಾರಾಯಣರಾವ್ ಅವರಿಗೆ ಜನಶಕ್ತಿ ವೇದಿಕೆಯ ವತಿಯಿಂದ ಪುಷ್ಪಗುಚ್ಛ ನೀಡಿದರು. ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು. `ಜಿಲ್ಲೆಯ ಅಭಿವೃದ್ಧಿ, ಸಾರ್ವಜನಿಕರ ಸಮಸ್ಯೆಗಳ ಪರಿಹಾರ ಹಾಗೂ ಜನಪರ ಆಡಳಿತಕ್ಕೆ ತಮ್ಮಿಂದ ಉತ್ತಮ ಸಹಕಾರ ದೊರೆಯುವ ವಿಶ್ವಾಸವಿದೆ’ ಎಂದು ಜನಶಕ್ತಿ ವೇದಿಕೆಯವರು ಹೇಳಿದರು. ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಕೃಷ್ಣ ಸೈಲ್, ಪ್ರಮುಖರಾದ ಅಲ್ತಾಫ್ ಶೇಕ್, ಸಿ ಎನ್ ನಾಯ್ಕ, ಖೈರುನಿಸಾ ಶೇಕ್, ಶಿವಾನಂದ ವಿ ನಾಯ್ಕ, ಸುರೇಶ್ ನಾಯ್ಕ ಸೇರಿದಂತೆ ಜನಶಕ್ತಿ ವೇದಿಕೆಯ ವೇದಿಕೆಯ ಇತರ ಪದಾಧಿಕಾರಿಗಳು ಇದ್ದರು.