ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭೂಮಿ ಸಾಗುವಳಿದಾರರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಹಾಗೂ ಪ್ರಧಾನ ಸಂಚಾಲಕ ಜಿ ಎಂ ಶೆಟ್ಟಿ ಅಚವೆ ಅವರು ವಿಧಾನಸಭೆಯ ಉಪಸಭಾಪತಿ ಮಂಕಾಳ ವೈದ್ಯ ಅವರನ್ನು ಭೇಟಿಯಾಗಿದ್ದಾರೆ.
ಜಿಲ್ಲೆಯ ಅರಣ್ಯ ಭೂಮಿ ಸಾಗುವಳಿದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಉಪಸಭಾಪತಿಗಳ ಗಮನ ಸೆಳೆದ ಅವರು `ಪರಿಶಿಷ್ಟ ಪಂಗಡದ ಜನರಿಗೆ ಅರಣ್ಯ ಭೂಮಿಯ ಅಧಿಭೋಗದ ಹಕ್ಕು ನೀಡಿರುವ ಮಾದರಿಯಲ್ಲಿ ಜಿಲ್ಲೆಯ ಇತರ ಪಾರಂಪರಿಕ ಅರಣ್ಯವಾಸಿಗಳು ಹಾಗೂ ಅರಣ್ಯ ಭೂಮಿ ಸಾಗುವಳಿದಾರರಿಗೂ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಯ ಹಕ್ಕು ನೀಡಬೇಕು’ ಎಂದು ಒತ್ತಾಯಿಸಿದ್ದಾರೆ. `2006ರ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಗೆ 2012ರಲ್ಲಿ ತರಲಾದ ತಿದ್ದುಪಡಿ ನಿಯಮಗಳ ಅನ್ವಯ ಸ್ಥಳ ಮಹಜರು ಸಹಿತ ಕ್ಲೇಮು ಅರ್ಜಿಗಳ ಮರುಪರಿಶೀಲನೆ ನಡೆಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಇತ್ತೀಚೆಗೆ ಹೊರಡಿಸಿರುವ ಆದೇಶವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. 2005ರ ಡಿಸೆಂಬರ್ 13ಕ್ಕೂ ಪೂರ್ವದಿಂದ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ಅರ್ಹರು ಭೂಮಿಯ ಅಧಿಭೋಗದ ಹಕ್ಕಿನಿಂದ ವಂಚಿತರಾಗದoತೆ ಸ್ಥಳ ಮಹಜರು ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
`ಜಿಲ್ಲೆಯ ಶಾಸಕರ ಉಪಸ್ಥಿತಿಯೊಂದಿಗೆ ಅರಣ್ಯ, ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾರವಾರದ ಜಿಲ್ಲಾ ಕೇಂದ್ರದಲ್ಲಿ ಉನ್ನತಾಧಿಕಾರ ಮಟ್ಟದ ಸಂವಾದ ಸಭೆ ಆಯೋಜಿಸಬೇಕು. ಸಭೆಯಲ್ಲಿ ಜಿಲ್ಲೆಯ ಅರಣ್ಯ ಭೂಮಿ ಹಕ್ಕು ಹೋರಾಟದ ಪ್ರಮುಖರು ಹಾಗೂ ಸಂಬoಧಪಟ್ಟ ಅಧಿಕಾರಿಗಳು ಭಾಗವಹಿಸಿ ಸಮಸ್ಯೆಗಳ ಪರಿಹಾರಕ್ಕೆ ನಿರ್ಣಾಯಕ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. ಇದಲ್ಲದೆ, `1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ 1978ಕ್ಕೂ ಪೂರ್ವದ ಅರಣ್ಯ ಭೂಮಿ ಒತ್ತುವರಿಗಳನ್ನು ಸಕ್ರಮಗೊಳಿಸುವ ಸಂದರ್ಭದಲ್ಲಿ ಬಿಟ್ಟುಹೋಗಿದ್ದ ಸಾವಿರಾರು ಅರ್ಹ ಪ್ರಕರಣಗಳನ್ನು ಮರುಸಮೀಕ್ಷೆ ನಡೆಸಿ ಭೂಮಿಯ ಹಕ್ಕು ನೀಡಲು ಸರ್ಕಾರದ ಮಟ್ಟದಲ್ಲಿ ನಡವಳಿ ನಡೆದಿದ್ದರೂ ಈವರೆಗೆ ಅಧಿಕೃತ ಆದೇಶ ಹೊರಡಿಸಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದ್ದಾರೆ. ಅವರ ಮನವಿಗೆ ಸ್ಪಂದಿಸಿದ ಮಂಕಾಳ ವೈದ್ಯ ಅವರು `ಸಮಸ್ಯೆಗಳ ಪರಿಹಾರಕ್ಕಾಗಿ ಅರಣ್ಯ ಸಚಿವರನ್ನು ಜಿಲ್ಲೆಗೆ ಆಹ್ವಾನಿಸಕಾಗುತ್ತದೆ. ಆ ವೇಳೆ ಚರ್ಚೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದ್ದಾರೆ.