ಯಲ್ಲಾಪುರ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿದ್ದು, `ಯಲ್ಲಾಪುರದಲ್ಲಿರುವ ಭ್ರಷ್ಟರ ಬಣ್ಣ ಬಯಲು ಮಾಡುವೆ’ ಎಂದು ಗುಡುಗಿದ್ದಾರೆ. `ಹೆಬ್ಬಾರ್ ನಗರದಲ್ಲಿ ಜಿ+2 ಮನೆ ನಿರ್ಮಾಣ ನಡೆದಿದ್ದು, ಅನೇಕ ಮನೆಗಳು ಶ್ರೀಮಂತರ ಪಾಲಾಗಿವೆ. ಈ ಬಗ್ಗೆ ನಾಲ್ಕು ಬಾರಿ ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಮುಂದಿನ ಹೋರಾಟ ಅನಿವಾರ್ಯ’ ಎಂದವರು ವಿವರಿಸಿದ್ದಾರೆ.
ಪ್ರಸಾದ ಹೆಗಡೆ ಅವರ ಮಾತು ಆಲಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು `ಬಡವರಿಗೆ ಆಗುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ಬಡವರಿಗೆ ಸೂರು ಕೊಡಬೇಕು ಎಂಬುದು ಬಿಜೆಪಿಯ ಕನಸಾಗಿದ್ದು, ಅದರಲ್ಲಿ ಭ್ರಷ್ಟಾಚಾರ ನಡೆಯಲು ಬಿಡುವುದಿಲ್ಲ’ ಎಂದಿದ್ದಾರೆ. `ಬಿಜೆಪಿ ಸರ್ಕಾರ ಬಡವರಿಗೆ ಮನೆ ನೀಡಬೇಕು ಎಂದು ಯೋಜನೆ ರೂಪಿಸಿತ್ತು. ಬಿಜೆಪಿ ಅಧಿಕಾರ ಇದ್ದಾಗ ಆಗಿನ ಮುಖ್ಯಮಂತ್ರಿಗಳು ಮನೆ ಮಂಜೂರಿ ಮಾಡಿದ್ದರು. ಆದರೆ, ಆ ಯೋಜನೆ ಶ್ರೀಮಂತರ ಪಾಲಾಗಿರುವುದು ಸರಿಯಲ್ಲ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು. `ತನಿಖೆಗೆ ಆಗ್ರಹಿಸಿ ತಾನೂ ಪತ್ರ ಬರೆಯುವೆ’ ಎಂದು ಹೇಳಿ ಪ್ರಸಾದ ಹೆಗಡೆ ಅವರನ್ನು ಸಮಾಧಾನ ಮಾಡಿದರು.
`ಯಲ್ಲಾಪುರದಲ್ಲಿ ಇನ್ನೂ 250 ಮನೆ ಹಂಚಿಕೆ ಆಗಬೇಕಿದೆ. ಅದಾದರೂ, ಬಡವರಿಗೆ ಸಿಗಬೇಕಿದೆ. ಈ ನಿಟ್ಟಿನಲ್ಲಿಯೂ ಬಿಜೆಪಿ ಹೋರಾಟ ನಡೆಸಲಿದೆ. ಒಂದೆರಡಲ್ಲ, ನೂರು ಬಾರಿ ಪ್ರತಿಭಟನೆ ನಡೆಸಲು ಸಹ ನಾವು ಸಿದ್ಧ’ ಎಂದು ಪ್ರಸಾದ ಹೆಗಡೆ ಅವರು ಈ ವೇಳೆ ಹೇಳಿದರು. `ಆ ಪ್ರತಿಭಟನೆಗೆ ನಾನು ಬರುವೆ. ಎಲ್ಲರೂ ಸೇರಿ ಭ್ರಷ್ಟರ ಬಣ್ಣ ಬಯಲು ಮಾಡೋಣ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭರವಸೆ ನೀಡಿದರು. `ನಾವು ನಡೆಸುವ ಪ್ರತಿಭಟನೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರಿಗೂ ತಕ್ಕ ಪಾಠ ಕಲಿಸಬೇಕು’ ಎಂದು ಪ್ರಸಾದ ಹೆಗಡೆ ಅವರ ಜೊತೆ ಹೋದವರು ಹೇಳಿದರು. `ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುವೆ. ಅದಕ್ಕೂ, ಅಧಿಕಾರಿಗಳು ಬಗ್ಗದಿದ್ದರೆ ನನ್ನ ನೇತ್ರತ್ವದಲ್ಲಿಯೇ ಪ್ರತಿಭಟನೆ ನಡೆಯಲಿದೆ’ ಎಂದು ಎಚ್ಚರಿಸಿದರು.