ಆಲಳ್ಳಿಯ ಕಮಲವ್ವ ಆಡೂರು ಅವರು ಕೊಲೆಯಾಗಿ 12 ದಿನ ಕಳೆದಿದೆ. ಕಳೆದ ಎರಡು ತಿಂಗಳಿನಿoದ ಪದೇ ಪದೇ ಕಮಲವ್ವ ಆಡೂರು ಅವರನ್ನು ಭೇಟಿ ಮಾಡುತ್ತಿದ್ದ ಮಾರುತಿ ಮೂಡಸಾಲಿ ಅವರು ಮಾತ್ರ ಒಮ್ಮೆಯೂ ಅವರ ಮನೆ ಕಡೆ ಬಂದಿಲ್ಲ. ಕರೆಯದೇ ಇದ್ದರೂ ಕಾರ್ಯಕ್ರಮಕ್ಕೆ ಬರುತ್ತಿದ್ದ ಮಾರುತಿ ಮೂಡಸಾಲಿ ಅವರು ಕಮಲವ್ವ ಆಡೂರು ಅವರ ಸಾವಿನ ನಂತರ ನಾಪತ್ತೆಯಾಗಿದ್ದು, ಸದ್ಯ ಅವರ ಮೇಲೆಯೇ ಅನುಮಾನ ಶುರುವಾಗಿದೆ.
ಮುಂಡಗೋಡಿನ ಪಾಳದ ಆಲಳ್ಳಿಯಲ್ಲಿ ಕಮಲವ್ವ ತಿರುಕಪ್ಪ ಆಡೂರು ಅವರು ವಾಸವಾಗಿದ್ದರು. 75 ವರ್ಷದ ಅವರು ತಮ್ಮ ಬಳಿ ಬಂಗಾರದ ಒಡವೆ ಹಾಗೂ ಕೆಲ ಪ್ರಮಾಣದ ಹಣವನ್ನಿರಿಸಿಕೊಂಡಿದ್ದರು. ಎರಡು ತಿಂಗಳ ಹಿಂದೆ ಕಮಲವ್ವ ಅವರ ಪುತ್ರ ರಾಘವೇಂದ್ರ ಆಡೂರು ಅವರು ತಮ್ಮ ಮನೆಯಲ್ಲಿ ಮಗಳ ಸಲುವಾಗಿ ಕಾರ್ಯಕ್ರಮವೊಂದನ್ನು ನಡೆಸಿದ್ದರು. ಆಗ, ಅದೇ ಭಾಗದ ಮಾರುತಿ ಆಡವೆಪ್ಪ ಮೂಡಸಾಲಿ ಅವರು ಕರೆಯದಿದ್ದರೂ ಆ ಕಾರ್ಯಕ್ರಮಕ್ಕೆ ಬಂದಿದ್ದರು. ಆ ದಿನ ಕುಟುಂಬದ ಎಲ್ಲರ ಜೊತೆ ಅವರು ಅತ್ಯಂತ ಆತ್ಮೀಯರಾಗಿ ಮಾತನಾಡಿದ್ದರು. ಆ ದಿನ ಕಮಲವ್ವ ಆಡೂರು ಅವರು ಧರಿಸಿದ್ದ ಬಂಗಾರವನ್ನು ಅವರು ನೋಡಿದ್ದರು. ಅದಾದ ನಂತರ ಮಾರುತಿ ಮೂಡಸಾಲಿ ಅವರು ಪದೇ ಪದೇ ಕಮಲವ್ವ ಅವರನ್ನು ಭೇಟಿಯಾಗುತ್ತಿದ್ದರು. ಎರಡು ತಿಂಗಳ ಅವಧಿಯಲ್ಲಿ ಅವರ ವಿಶ್ವಾಸಗಳಿಸಿದ್ದರು.
ಎರಡು ವಾರದ ಹಿಂದೆ ಆಲಳ್ಳಿಯಲ್ಲಿ ಒಂಟಿಯಾಗಿದ್ದ ಕಮಲವ್ವ ಆಡೂರು ಅವರು ಕೊಲೆಯಾದರು. ಕಮಲವ್ವ ಅವರನ್ನು ಬೆತ್ತಲೆಗೊಳಿಸಿ ಅವರ ಬಳಿಯಿದ್ದ 1.70 ಲಕ್ಷ ರೂ ಹಣ ಹಾಗೂ 25 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿದ್ದರು. ಮರುದಿನ ಬೆಳಗ್ಗೆ ಮೊಮ್ಮಗಳು ಅಜ್ಜಿಗೆ ಚಹ ಕೊಡಲು ಹೋದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿದ್ದು, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದರೂ ಆರೋಪಿ ಮಾತ್ರ ಸಿಕ್ಕಿರಲಿಲ್ಲ.
ಈ ಎಲ್ಲದರ ನಡುವೆ ಕಮಲವ್ವ ಅವರನ್ನು ಪದೇ ಪದೇ ಭೇಟಿ ಮಾಡಿ ಆತ್ಮೀಯರಾಗಿದ್ದ ಮಾರುತಿ ಮೂಡಸಾಲಿ ಅವರು ಊರು ಬಿಟ್ಟಿದ್ದರು. ಕಮಲವ್ವ ಅವರು ಸಾವನಪ್ಪಿದರೂ ಸಹ ಅವರು ಅಂತ್ಯ ಸಂಸ್ಕಾರಕ್ಕೆ ಬಂದಿರಲಿಲ್ಲ. ಎಲ್ಲರ ಜೊತೆ ಅಂತಿಮ ದರ್ಶನವನ್ನು ಸಹ ಮಾಡಿರಲಿಲ್ಲ. ಎರಡು ತಿಂಗಳ ಹಿಂದೆ ಕರೆಯದಿದ್ದರೂ ಕಾರ್ಯಕ್ರಮಕ್ಕೆ ಬಂದಿದ್ದ ಮಾರುತಿ ಮೂಡಸಾಲಿ ಅವರು ಇದೀಗ ಅಜ್ಜಿ ಸಾವನಪ್ಪಿದರೂ ಬಾರದ ಬಗ್ಗೆ ಕೆಲವರು ಪ್ರಶ್ನಿಸಿದ್ದರು. ಆದರೆ, ಆ ವೇಳೆ ಅದಕ್ಕೆ ಉತ್ತರ ಸಿಕ್ಕಿರಲಿಲ್ಲ. ನಂತರ ಕಮಲವ್ವ ಅವರು ಸಾವನಪ್ಪಿರುವುದು ಗೊತ್ತಾಗುವ ಹಿಂದಿನ ದಿನವಷ್ಟೇ ಮಾರುತಿ ಮೂಡಸಾಲಿ ಅವರು ಅಜ್ಜಿ ಮನೆಗೆ ಬಂದಿದ್ದ ವಿಷಯ ಬಹಿರಂಗಗೊoಡಿತು.
ಈ ಹಿನ್ನಲೆ ಮಾರುತಿ ಮೂಡಸಾಲಿ ಅವರ ಮೇಲೆ ಕಮಲವ್ವ ಅವರ ಪುತ್ರ ರಾಘವೇಂದ್ರ ಆಡೂರು ಅವರಿಗೆ ಅನುಮಾನ ಮೂಡಿತು. ತಾಯಿ ಮರಣದ ನಂತರ ಮಾಡಬೇಕಾದ ಕಾರ್ಯಗಳನ್ನು ರಾಘವೇಂದ್ರ ಆಡೂರು ಅವರು ಮಾಡಿ ಮುಗಿಸಿದರು. ಮರಣೋತ್ತರ ವರದಿಯನ್ನು ಅವರು ಪರಿಶೀಲನೆ ಮಾಡಿದರು. ಈವರೆಗೂ ಊರಿಗೆ ಬರದ ಮಾರುತಿ ಮೂಡಸಾಲಿ ಅವರೇ ಕಮಲವ್ವ ಅವರನ್ನು ಕೊಲೆ ಮಾಡಿರುವ ಸಂಶಯ ಇನ್ನಷ್ಟು ಹೆಚ್ಚಾಗಿರುವುದರಿಂದ ಅವರು ಮಾರುತಿ ಮೂಡಸಾಲಿ ಅವರನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿದರು.