62 ವರ್ಷದ ವೃದ್ಧನಿಂದ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತೆಗೆ ಗಂಡು ಮಗು ಜನಿಸಿದೆ. ಆಸ್ಪತ್ರೆಯ ಆರೈಕೆಯಲ್ಲಿರುವ ಬಾಣಂತಿಯನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಅಶೋಕ ಆರ್ ಮತ್ತು ಉಪ ನಿರ್ದೇಶಕ ಶ್ರೀನಿವಾಸ ಅವರು ಶನಿವಾರ ಭೇಟಿ ಮಾಡಿದ್ದಾರೆ.
ಇಸ್ಮಾಯಲ್ ಸಾಬ್ ಹುಲಗೋರರ ಎಂಬಾತರು ಮುಂಡಗೋಡಿನಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದರು. ಬಾಲಕಿ ಗರ್ಭವತಿಯಾಗಿ 9 ತಿಂಗಳು ತುಂಬಿದ ನಂತರ ಈ ವಿಷಯ ಹೊರ ಬಂದಿದ್ದು, ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇಸ್ಮಾಯಲ್ ಸಾಬ್ ಹುಲಗೋರರ ಅವರ ಮನೆ ಧ್ವಂಸ ಮಾಡಿ ಆಕ್ರೋಶಹೊರಹಾಕಿದ್ದರು. ಅದಾದ ನಂತರ ಮುಂಡಗೋಡು ಬಂದ್ ಮಾಡಿ ಜನ ಆರೋಪಿ ವಿರುದ್ಧ ಪ್ರತಿಭಟಿಸಿದ್ದರು.
ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ನಡುವೆ ಗಂಡು ಮಗುವಿಗೆ ಜನ್ಮ ನೀಡಿದರು. ಶನಿವಾರ ಸಂತ್ರಸ್ತ ಬಾಲಕಿ ಮತ್ತು ಆಕೆಯ ಪೋಷಕರನ್ನು, ಬೆಂಗಳೂರಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಅಶೋಕ ಆರ್ ಮತ್ತು ಉಪ ನಿರ್ದೇಶಕ ಶ್ರೀನಿವಾಸ ಅವರು ಶನಿವಾರ ಭೇಟಿ ನೀಡಿದ್ದಾರೆ. ಅಲ್ಲಿನ ವೈದ್ಯರೊಂದಿಗೆ ಸಂತ್ರಸ್ತೆ ಬಗ್ಗೆ ವಿಚಾರಿಸಿದ್ದು, ನಂತರ ಸಂತ್ರಸ್ಥೆ ಮತ್ತು ಆಕೆಯ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.
ಈ ಕುಟುಂಬಕ್ಕೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದಿಂದ ಸಿಗುವ ಸೌಲಭ್ಯಗಳನ್ನು ನೀಡಲು ವ್ಯವಸ್ಥೆ ಮಾಡುವುದಾಗಿ ಮತ್ತು ಸಂತ್ರಸ್ತ ಬಾಲಕಿಗೆ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಪ್ರವೇಶ ಕಲ್ಪಿಸಲು ವ್ಯವಸ್ಥೆ ಮಾಡುವುದಾಗಿ ಅವರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದ್ದರು.