`ಹತ್ತು ವರ್ಷದ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ ಅವರು ಆಗ್ರಹಿಸಿದ್ದಾರೆ. `ಇಂಥಹ ಘಟನೆಯಿಂದ ನಾಗರಿಕ ಸಮಾಜಕ್ಕೆ ಆಘಾತವಾಗಿದ್ದು, ಈ ಬಗೆಯ ಕೃತ್ಯ ಎಸಗುವವರಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗಬೇಕು’ ಎಂದವರು ಒತ್ತಾಯಿಸಿದ್ದಾರೆ.
`ಕಾರವಾರದ ಮಾಜಾಳಿ ಬಳಿ 10 ವರ್ಷದ ಬಾಲಕಿ ಮೇಲೆ ಕಟಿಂಗ್ ಶಾಪ್ ನಡೆಸುವ ವ್ಯಕ್ತಿ ದೌರ್ಜನ್ಯ ಎಸಗಿದ್ದಾರೆ. ವಿಷಯ ಹೊರ ಬಂದ ನಂತರ ಆರೋಪಿ ಪರಾರಿಯಾಗಿದ್ದು, ಆರೋಪಿ ಎಲ್ಲಿಯೇ ಇದ್ದರೂ ಕೂಡಲೇ ಬಂಧಿಸಬೇಕು. ಉತ್ತರ ಪ್ರದೇಶದಿಂದ ಇಲ್ಲಿ ದುಡಿಯಲು ಬಂದು ಸಣ್ಣ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಇಂಥವರ ಪರ ಯಾರೂ ವಕಾಲತ್ತುವಹಿಸಬಾರದು’ ಎಂದು ಅವರು ಹೇಳಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ. ಏನು ಅರಿಯದ ಮುಗ್ದ ಮನಸ್ಸುಗಳ ಜೀವನದ ಜೊತೆ ಕ್ರೌರ್ಯ ಮೆರೆಯುವ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕದಿದ್ದರೆ ಇನ್ನಷ್ಟು ಅಪಾಯ ಖಚಿತ. ಇಂಥ ಆರೋಪಿತರನ್ನು ಮಟ್ಟ ಹಾಕಿದಾಗ ಮಾತ್ರ ಅಂಥ ಮನೋಧೋರಣೆಯುಳ್ಳವರಿಗೆ ಹೆದರಿಕೆ ಬರುತ್ತದೆ’ ಎಂದವರು ಹೇಳಿದ್ದಾರೆ. `ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.