ದೇಶ-ವಿದೇಶಗಳಿಗೆ ಸಾಂಬಾರು ಪದಾರ್ಥ ರಪ್ತು ಮಾಡುವ ವಾನಳ್ಳಿಯ ನಿತ್ಯಾನಂದ ನಾಯಕ ಅವರು ಈ ಬಾರಿ ಒಟ್ಟಿಗೆ 98 ಲಕ್ಷ ರೂ ಮೌಲ್ಯದ ಸರಕು ರವಾನೆಗೆ ಮುಂದಾಗಿದ್ದು, ಅಲ್ಲಿ ಮೋಸ ಹೋಗಿದ್ದಾರೆ. ಅರಶಿನ ಕೊಂಬು ಖರೀದಿಸುವುದಾಗಿ ನಂಬಿಸಿದ ಗ್ರೀಸ್ ಪ್ರಜೆಯೊಬ್ಬರು ನಿತ್ಯಾನಂದ ನಾಯಕ ಅವರಿಗೆ 4.29 ಲಕ್ಷ ರೂ ಯಾಮಾರಿಸಿದ್ದಾರೆ.
ಕುಮಟಾದ ವನ್ನಳ್ಳಿಯ ನಂದಗೋಕುಲ ನಿವಾಸದಲ್ಲಿ ನಿತ್ಯಾನಂದ ನಾಯಕ ಅವರು ವಾಸವಾಗಿದ್ದಾರೆ. ಸಾಂಬಾರು ಪದಾರ್ಥಗಳನ್ನು ರಪ್ತು ಮಾಡುವ ಉದ್ಯಮದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಬಾರಿ ಅವರು ಅಪಾರ ಪ್ರಮಾಣದಲ್ಲಿ ಅರಶಿನ ಕೊಂಬು ಮಾರಾಟಕ್ಕೆ ಯತ್ನಿಸಿದ್ದು, ಅದಕ್ಕಾಗಿ ಗೂಗಲ್ ಮೊರೆ ಹೋಗಿದ್ದಾರೆ. ಗೂಗಲ್ ಸರ್ಚನಲ್ಲಿ ಅರಶಿನ ಖರೀದಿದಾರರ ಹುಡುಕಾಟ ನಡೆಸಿದಾಗ ಅವರಿಗೆ ವೆಬ್ ಸಲ್ಯೂಶನ್ ಎಕ್ಸಪರ್ಟ ಎಂಬ ಕಂಪನಿಯ ಫೋನ್ ನಂ ಸಿಕ್ಕಿದೆ. ಅಲ್ಲಿರುವ ಸಂಖ್ಯೆಗೆ ಫೋನ್ ಮಾಡಿದಾಗ ಭುವನಚಂದ್ರ ಎಂಬಾತರು ಮಾತಿಗೆ ಸಿಕ್ಕಿದ್ದಾರೆ.
`ತಾನೇ ಕಂಪನಿ ಮಾಲಕ’ ಎಂದ ಭುವನಚಂದ್ರ ಅವರು `ತಾನು ಸಾಕಷ್ಟು ದೇಶಗಳಿಗೆ ಅನೇಕ ವಸ್ತುಗಳನ್ನು ಕಳುಹಿಸಿದ್ದೇನೆ. ತಮ್ಮಲ್ಲಿರುವ ಅರಶಿನ ಕೊಂಬುಗಳನ್ನು ಗ್ರೀಸ್ ದೇಶಕ್ಕೆ ಮಾರಾಟ ಮಾಡಿಕೊಡುತ್ತೇನೆ’ ಎಂದಿದ್ದಾರೆ. ಅದಾದ ನಂತರ ಗ್ರೀಸ್ ಪ್ರಜೆ ವಾಸಿಸ್ ಎಂಬಾತರ ಮೂಲಕ ನಿತ್ಯಾನಂದ ನಾಯಕ ಅವರಿಗೆ ವಾಟ್ಸಪ್ ಫೋನ್ ಮಾಡಿಸಿದ್ದಾರೆ. 28 ಮೆಟ್ರಿಕ್ ಟನ್ ಅರಶಿನ ಕೊಂಬನ್ನು 98 ಲಕ್ಷ ರೂಪಾಯಿಗೆ ಮಾರಾಟ ಮಾಡುವ ಬಗ್ಗೆ ಮಾತುಕಥೆ ನಡೆದಿದೆ.
ಅದಾದ ನಂತರ ವಿವಿಧ ದಾಖಲೆಗಳ ವೆಚ್ಚ ಹಾಗೂ ಕಾಗದಪತ್ರಗಳ ಸಿದ್ಧತೆಗಾಗಿ ಭುವನಚಂದ್ರ ಹಾಗೂ ವಾಸಿಸ್ ಸೇರಿ ಹಣ ಕೇಳಿದ್ದಾರೆ. 98 ಲಕ್ಷ ರೂ ಬರುವ ಆಸೆಗೆ ಬಿದ್ದ ನಿತ್ಯಾನಂದ ನಾಯಕ ಅವರು 4.29 ಲಕ್ಷ ರೂ ವರ್ಗಾಯಿಸಿದ್ದಾರೆ. ಅದಾದ ನಂತರ ಅವರ ಬಳಿಯಿರುವ ಅರಶಿನ ಕೊಂಬನ್ನು ಯಾರೂ ಖರೀದಿಸಿಲ್ಲ. 98 ಲಕ್ಷ ರೂ ಹಣವನ್ನು ಪಾವತಿಸಿಲ್ಲ. ಮೋಸ ಹೋಗಿರುವುದನ್ನು ಅರಿತು ಅವರು ಪೊಲೀಸರ ಸಹಾಯ ಕೇಳಿದ್ದಾರೆ.