ಕಾರವಾರದ ಖಜಾನೆ ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿದ್ದ ಅಭಿಷೇಕ್ ಹಳಿಯಾಳಕರ್ ಅವರು ಬೈಕ್ ಅಪಘಾತದಲ್ಲಿ ಸಾವನಪ್ಪಿದ್ದಾರೆ. ನವೆಂಬರ್ 21ರ ರಾತ್ರಿ ಕಾರವಾರದಲ್ಲಿ ನಡೆದ ಅವಘಡದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
21 ವರ್ಷದ ಅಭಿಷೇಕ್ ಪುರುಷೋತ್ತಮ ಹಳಿಯಾಳಕರ್ ಅವರು ಹಳಿಯಾಳದಲ್ಲಿ ವಾಸವಾಗಿದ್ದರು. ಕಾರವಾರದ ಖಜಾನೆ ಕಚೇರಿಯಲ್ಲಿ ಅವರು ದ್ವಿತೀಯ ದರ್ಜೆ ಗುಮಾಸ್ತರಾಗಿ ಕೆಲಸ ಮಾಡಿಕೊಂಡಿದ್ದರು. ರಾಯಲ್ ಎನ್ ಫಿಲ್ಡ್ ಬೈಕ್ ಹೊಂದಿದ್ದ ಅವರು ವೇಗವಾಗಿ ಬೈಕ್ ಓಡಿಸುತ್ತಿದ್ದರು. ಅದೇ ಅವರ ಬದುಕು ಕಸಿದಿದ್ದು, ಕಾರವಾರದ ಚಿತ್ತಾಕುಲದ ಬಳಿ ನಡೆದ ಅಪಘಾತದಲ್ಲಿ ಅವರು ಸಾವನಪ್ಪಿದರು.
ನವೆಂಬರ್ 21ರ ರಾತ್ರಿ 11.15ಕ್ಕೆ ಅಭಿಷೇಕ್ ಹಳಿಯಾಳಕರ್ ಅವರು ಕಾರವಾರದ ಮಾಜಾಳಿಯ ಬಾಬಾ ರಾಮದೇವ್ ಹೊಟೇಲ್ ಕಡೆಯಿಂದ ಬೈಕ್ ಏರಿ ಹೊರಟರು. ಹೆದ್ದಾರಿ ಮೇಲೆ ವೇಗವಾಗಿ ಸಂಚರಿಸಿದ ಅವರು ಮಾಜಾಳಿಯ ವಿಠ್ಠಲ ರುಕ್ಮಿಣಿ ದೇಗುಲದವರೆಗೂ ಸರಿಯಾಗಿಯೇ ಬೈಕ್ ಓಡಿಸಿದರು. ಅಲ್ಲಿ ಅವರ ಬೈಕಿನ ವೇಗ ಇನ್ನಷ್ಟು ಹೆಚ್ಚಾಗಿದ್ದು, ಬೈಕು ಅಭಿಷೇಕ ಹಳಿಯಾಳಕರ್ ಅವರ ನಿಯಂತ್ರಣ ತಪ್ಪಿತು. ಪರಿಣಾಮ ಆ ಬೈಕು ಎದುರಿಗಿದ್ದ ಡಿವೈಡರಿಗೆ ಗುದ್ದಿತು.
ಅಪಘಾತದ ರಭಸಕ್ಕೆ ನೆಲಕ್ಕೆ ಬಿದ್ದ ಅಭಿಷೇಕ್ ಹಳಿಯಾಳಕರ್ ಅವರ ತಲೆ ಹಾಗೂ ಕೈ-ಕಾಲಿಗೆ ಗಂಭೀರ ಗಾಯವಾಯಿತು. ಅಲ್ಲಿಯೇ ಅವರು ಕೊನೆಯುಸಿರೆಳೆದರು. ಸರ್ಕಾರಿ ಸೇವೆಯಲ್ಲಿರುವ ನವೀನ ನೀಲಪ್ಪ ದೊಡ್ಮನಿ ಅವರು ಈ ಅಪಘಾತದ ಬಗ್ಗೆ ಪೊಲೀಸ್ ಮಾಹಿತಿ ನೀಡಿದರು.