ಮಳಲಗಾಂವಿನ ಶಿವಪ್ಪ ನಾಯ್ಕ ಹಾಗೂ ನಾಗರಾಜ ನಾಯ್ಕ ಅವರು ಸೇರಿ ಗಂಡು ಆನೆಯೊಂದನ್ನು ಕೊಂದಿದ್ದಾರೆ. ಪ್ರತಿ ವರ್ಷ ಗದ್ದೆಗೆ ನುಗ್ಗಿ ದಾಂದಲೆ ಮಾಡುತ್ತಿದ್ದ ಆನೆಗೆ ಅವರು ಮುಕ್ತಿ ಕಾಣಿಸಿದ್ದಾರೆ.
ಶಿರಸಿಯ ಮಳಲಗಾಂವಿನಲ್ಲಿ ಶಿವಪ್ಪ ನಾಯ್ಕ ಅವರು ವಾಸವಾಗಿದ್ದಾರೆ. ಅವರ ಪುತ್ರ ನಾಗರಾಜ ನಾಯ್ಕ ಅವರು ಅಲ್ಲಿಯೇ ಕೃಷಿ ಭೂಮಿ ಹೊಂದಿದ್ದಾರೆ. ಅವರ ಮಾಲ್ಕಿ ಜಮೀನಿಗೆ ಪ್ರತಿ ವರ್ಷ ವನ್ಯಜೀವಿಗಳು ನುಗ್ಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಮಾಡುತ್ತಿದೆ. ಅದರಲ್ಲಿಯೂ, ಕಾಡಾನೆ ದಾಳಿಗೆ ಶಿವಪ್ಪ ನಾಯ್ಕ ಹಾಗೂ ನಾಗರಾಜ ನಾಯ್ಕ ಅವರು ತತ್ತರಿಸಿದ್ದು, ಆನೆ ಬೆದರಿಸುವುದಕ್ಕಾಗಿ ಅವರು ವಿದ್ಯುತ್ ತಂತಿಯ ಮೊರೆ ಹೋಗಿದ್ದಾರೆ. ಜಮೀನಿನ ಸುತ್ತಲು ಬೇಲಿ ಅಳವಡಿಸಿ ಅದಕ್ಕೆ ಅಕ್ರಮವಾಗಿ ವಿದ್ಯುತ್ ಹರಿಸಿದ್ದಾರೆ. ಭಾನುವಾರ ರಾತ್ರಿ ಆ ವಿದ್ಯುತ್ ಸ್ಪರ್ಶದಿಂದ 22 ವರ್ಷದ ಗಂಡು ಆನೆ ಸಾವನಪ್ಪಿದೆ.
ನಸುಕಿನ ವೇಳೆ ಆನೆ ಶವ ಕಾಣಿಸಿದ್ದು, ಅರಣ್ಯಾಧಿಕಾರಿಗಳು ಅಲ್ಲಿ ದೌಡಾಯಿಸಿದ್ದಾರೆ. ಈ ವೇಳೆ ಶಿವಪ್ಪ ನಾಯ್ಕ ಹಾಗೂ ನಾಗರಾಜ ನಾಯ್ಕ ಅವರು ತಮ್ಮಿಂದ ಆದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರೇ ಅರಣ್ಯಾಧಿಕಾರಿಗಳಿಗೆ ಶರಣಾಗಿದ್ದಾರೆ. ಜಮೀನಿನ ಬೇಲಿಗೆ ವಿದ್ಯುತ್ ಕಂಬದಿAದ ನೇರ ಸಂಪರ್ಕ ಮಾಡಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದು, ಆ ತಂತಿಯನ್ನು ವಶಕ್ಕೆಪಡೆದಿದ್ದಾರೆ.
ಸಾವನಪ್ಪಿದ ಆನೆಯ ಮರಣೋತ್ತರ ಪರೀಕ್ಷೆ ನಡೆದಿದೆ. ಆನೆ ನೋಡಲು ಊರಿನ ನೂರಾರು ಜನ ಆಗಮಿಸಿದ್ದು, ಜನಪ್ರತಿನಿಧಿಗಳು ಸಹ ಸ್ಥಳಕ್ಕೆ ಬಂದಿದ್ದಾರೆ. ಸದ್ಯ ಅರಣ್ಯಾಧಿಕಾರಿಗಳು ಸ್ಥಳದಲ್ಲಿದ್ದಾರೆ. ವಿಚಾರಣೆ ಮುಂದುವರೆದಿದೆ.