ಯಲ್ಲಾಪುರದ ಅಡಿಕೆ ವರ್ತಕರಾದ ಸತೀಶ ಹೆಗಡೆ ಹಾಗೂ ರಾಘವೇಂದ್ರ ಗಾಂವ್ಕರ್ ಅವರು ಹುಬ್ಬಳ್ಳಿಯ ಫಾರುಕ್ ನರಗುಂದ ಅವರಿಗೆ ಅಡಿಕೆ ಮಾರಾಟ ಮಾಡಿದ್ದು, ಅವರಿಂದ ಹಣ ವಸೂಲಿ ಮಾಡಲಾಗದೇ ತತ್ತರಿಸಿದ್ದಾರೆ. ರಾಘವೇಂದ್ರ ಗಾಂವ್ಕರ್ ಹಾಗೂ ಸತೀಶ ಹೆಗಡೆ ಅವರಿಗೆ ಫಾರುಕ್ ನರಗುಂದ ಅವರಿಗೆ 29 ಲಕ್ಷ ರೂ ಬರಬೇಕಿದ್ದು, ಅವರು ಕೊಟ್ಟ ಚೆಕ್ ಬೌನ್ಸ್ ಆಗಿದೆ.
ಯಲ್ಲಾಪುರ ಎಪಿಎಂಸಿ ಯಾರ್ಡಿನಲ್ಲಿ ಅನಂತ ಹೋಂ ಇಂಡಸ್ಟಿಸ್ ಎಂಬ ಮಳಿಗೆಯಿದೆ. ಅದನ್ನು ಸತೀಶ ಅನಂತ ಹೆಗಡೆ ಅವರು ಮುನ್ನಡೆಸುತ್ತಿದ್ದಾರೆ. 2026ರ ಏಪ್ರಿಲ್ 4ರಂದು ಸತೀಶ್ ಹೆಗಡೆ ಅವರು 24.50 ಕ್ವಿಂಟಲ್ ಅಡಿಕೆಯನ್ನು ಹುಬ್ಬಳ್ಳಿಯ ಫಾರುಕ್ ನರಗುಂದ ಅವರಿಗೆ ಮಾರಾಟ ಮಾಡಿದ್ದಾರೆ. ಆ ವೇಳೆ, ಪ್ರತಿ ಕ್ವಿಂಟಲ್ ಅಡಿಕೆಗೆ 59524ರೂ ದರದಲ್ಲಿ ಅವರು ಮಾರಾಟ ಮಾಡಿದ್ದು, ತೆರಿಗೆ ಸೇರಿ ಒಟ್ಟು 1531254ರೂಪಾಯಿಯ ಬಿಲ್ ನೀಡಿದ್ದಾರೆ. ಆ ಅಡಿಕೆ ಹುಬ್ಬಳ್ಳಿ ಗೋದಾಮು ತಲುಪಿದ ಬಗ್ಗೆಯೂ ಸತೀಶ ಹೆಗಡೆ ಅವರು ಖಚಿತಪಡಿಸಿಕೊಂಡಿದ್ದಾರೆ. ಆದರೆ, ಅವರಿಗೆ ಅದರ ಹಣ ಮಾತ್ರ ಸಂದಾಯವಾಗಿಲ್ಲ.
ಹೀಗಿರುವಾಗ, ಜುಲೈ 7ರಂದು ಮತ್ತೆ ಯಲ್ಲಾಪುರಕ್ಕೆ ಬಂದಿದ್ದ ಫಾರುಕ್ ನರಗುಂದ ಅವರು ಸತೀಶ ಹೆಗಡೆ ಅವರನ್ನು ಇನ್ನೊಮ್ಮೆ ಭೇಟಿ ಆಗಿದ್ದಾರೆ. `ಆಗ ಕೊಟ್ಟ ಅಡಿಕೆ ಮಾರಾಟ ಮಾಡಿದ್ದು, ಅದರ ಹಣ ಬಂದಿಲ್ಲ’ ಎಂದು ಹೇಳಿದ್ದಾರೆ. `ಸದ್ಯ ಮತ್ತೊಮ್ಮೆ ಅಡಿಕೆಗೆ ಬೇಡಿಕೆ ಬಂದಿದ್ದು, ಅಡಿಕೆ ಕೊಡಿ’ ಎಂದು ಕೇಳಿದ್ದಾರೆ. ಶೀಘ್ರದಲ್ಲಿ ಹಣ ಮರಳಿಸುವ ಭರವಸೆ ನೀಡಿ ಮತ್ತೆ 4.20 ಕ್ವಿಂಟಲ್ ಅಡಿಕೆ ಖರೀದಿ ಮಾಡಿದ್ದಾರೆ. ಈ ಬಾರಿ 57324ರೂ ಕ್ವಿಂಟಲ್ ದರದ ಹಾಗೇ ತೆರಿಗೆ ಸೇರಿ 253976ರೂ ಮೌಲ್ಯದ ಅಡಿಕೆ ಖರೀದಿಸಿದ್ದಾರೆ.
ಈ ವೇಳೆ ಕೆನರಾ ಟೆಡರ್ಸ ಮಾಲಕರಾದ ರಾಘವೇಂದ್ರ ಗಾಂವ್ಕರ್ ಅವರ ಬಳಿಯೂ 17.57 ಕ್ವಿಂಟಾಲ್ ಅಡಿಕೆ ಖರೀದಿ ಮಾಡಿರುವುದಾಗಿ ತಿಳಿಸಿ, `ಅವರಿಗೂ 1089384ರೂ ಹಣ ಕೊಡಬೇಕು’ ಎಂದಿದ್ದಾರೆ. `ನಿಮ್ಮಿಬ್ಬರದ್ದು ಸೇರಿ ಒಂದೇ ಚೆಕ್ ನೀಡುವೆ’ ಎಂದು ಹೇಳಿದ ಫಾರುಕ್ ನರಗುಂದ ಅವರು ತಮ್ಮ ಪತ್ನಿ ಬೇಬಿ ಪಾತಿಮಾ ಅವರ ಹೆಸರಿನ 29 ಲಕ್ಷ ರೂಪಾಯಿಯ ಚೆಕ್ ಬರೆದಿದ್ದಾರೆ. ಆದರೆ, ಆ ಚೆಕ್ ಬೌನ್ಸ್ ಆಗಿದೆ. ಹಣ ಪಾವತಿ ಆಗದ ಬಗ್ಗೆ ಸತೀಶ ಹೆಗಡೆ ಅವರು ಫೋನ್ ಮಾಡಿದ್ದು, ಆಗ ಫಾರುಕ್ ನರಗುಂದ ಅವರು ಕೆಟ್ಟದಾಗಿ ಬೈದಿದ್ದಾರೆ. ಈ ಅನ್ಯಾಯದ ಬಗ್ಗೆ ಸತೀಶ ಹೆಗಡೆ ಅವರು ಕೋರ್ಟಿನ ಮೊರೆ ಹೋಗಿ, ಫಾರುಕ್ ನರಗುಂದ ಅವರ ವಿರುದ್ಧ ಕೇಸು ಹಾಕಿದ್ದಾರೆ.