ಮುಂದಿನ ವರ್ಷದ ಬಜೆಟ್ ನಿರ್ಣಯಕ್ಕಾಗಿ ಕಾರವಾರ ನಗರಸಭೆ ವಿವಿಧ ಸಂಘಟನೆಗಳ ಸಭೆ ನಡೆಸಲು ನಿರ್ಧರಿಸಿದೆ. ಆದರೆ, ಗಡಿಭಾಗದಲ್ಲಿ ದುಡಿಯುತ್ತಿರುವ ಕನ್ನಡ ಸಂಘಟನೆಗಳನ್ನು ಈ ಸಭೆಗೆ ಆಮಂತ್ರಿಸದೇ ದೂರವಿಡಲಾಗಿದೆ.
ಕರ್ನಾಟಕ ಪೌರಸಭಾ ಲೆಕ್ಕ ಮತ್ತು ಬಜೆಟ್ ನಿಯಮದ ಪ್ರಕಾರ ಸ್ಥಳೀಯ ಸಂಸ್ಥೆಗಳು ಆಯಾ ಸಾಲಿನ ಬಜೆಟ್ ಅಂದಾಜು ಪ್ರತಿ ಸಿದ್ಧಪಡಿಸಬೇಕು. ಅದಕ್ಕೆ ವಿವಿಧ ಸಂಘ-ಸoಸ್ಥೆಗಳನ್ನು ವಿಶ್ವಾಸಕ್ಕೆಪಡೆದು ಬಜೆಟ್ ಬಗ್ಗೆ ಚರ್ಚಿಸಬೇಕು. ಗಡಿ ಪ್ರದೇಶವಾದ ಕಾರವಾರದಲ್ಲಿ ಕನ್ನಡ ಸಂಘಟನೆಗಳು ಕನ್ನಡ ಉಳಿವಿಗಾಗಿ ಸಾಕಷ್ಟು ಹೋರಾಟ ನಡೆಸುತ್ತಿದ್ದು, ಅಂಥ ಸಂಘಟನೆಗಳನ್ನೇ ಕಾರವಾರ ನಗರಸಭೆ ನಿರ್ಲಕ್ಷಿಸಿದೆ. ಒಟ್ಟು 34 ಸಂಘಟನೆ ಹಾಗೂ ಪ್ರಮುಖರಿಗೆ ಪತ್ರ ರವಾನಿಸಿದ ನಗರಸಭೆ ಒಂದೇ ಒಂದು ಕನ್ನಡ ಸಂಘಟನೆಗಳಿಗೂ ಸಭೆಗೆ ಆಗಮಿಸುವ ಬಗ್ಗೆ ಆಮಂತ್ರಣ ನೀಡಿಲ್ಲ.
ನಗರಸಭಾ ವ್ಯಾಪ್ತಿಯಲ್ಲಿರುವ ರಸ್ತೆಗಳ ರಿಪೇರಿ ಮತ್ತು ರಸ್ತೆ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸಲು ನವೆಂಬರ್ 30ರಂದು ನಗರಸಭೆ ಸಭೆ ಕರೆದಿದೆ. ಬೆಳಗ್ಗೆ 11.30ಕ್ಕೆ ಈ ಸಭೆ ನಡೆಯಲಿದೆ. ಇದರಲ್ಲಿ ನಗಸಭೆ ಆದಾಯ ಹೆಚ್ಚಿಸಲು ಸಂಪನ್ಮೂಲ ಕ್ರೂಢೀಕರಣ, ನೈರ್ಮಲ್ಯೀಕರಣ, ಒಳ ಚರಂಡಿ ಮತ್ತು ಕಾಲುವೆಗಳ ನಿರ್ಮಾಣದ ಬಗ್ಗೆಯೂ ಚರ್ಚೆ ನಡೆಯಲಿದೆ. ಇನ್ನಿತರ ಮೂಲಭೂತ ಸೌಕರ್ಯ ಕಾಮಗಾರಿ ಕೈಗೊಳ್ಳುವ ಬಗ್ಗೆಯೂ ಚರ್ಚಿಸುವುದಾಗಿ ಸಭೆಯ ನೋಟಿಸಿನಲ್ಲಿ ವಿವರಿಸಲಾಗಿದೆ. ಆದರೆ, 34 ಸಂಘಟನೆ ಹಾಗೂ ಪ್ರಮುಖ ವ್ಯಕ್ತಿಗಳಿಗೆ ಆಮಂತ್ರಣ ನೀಡಿದ ನಗರಸಭೆ ಅಧಿಕಾರಿಗಳಿಗೆ ಕನ್ನಡ ಹೋರಾಟಗಾರರು ಕಣ್ಣಿಗೆ ಬಿದ್ದಿಲ್ಲ.
ಕಾರವಾರದಲ್ಲಿ ಐದಕ್ಕೂ ಅಧಿಕ ಕನ್ನಡ ಸಂಘಟನೆಗಳಿವೆ. ಅವುಗಳಲ್ಲಿ ಪ್ರಮುಖ ಮೂರು ಸಂಘಟನೆಗಳು ಸಕ್ರೀಯವಾಗಿದೆ. ಆದರೆ, ಅವುಗಳಿಗೂ ಅಧಿಕಾರಿಗಳು ಇಲ್ಲಿ ಮನ್ನಣೆ ನೀಡಿಲ್ಲ. ಈ ಬಗ್ಗೆ ಕನ್ನಡ ಸಂಘಟನೆಯವರಿoದ ಆಕ್ರೋಶವ್ಯಕ್ತವಾಗಿದೆ.
`ಗಡಿ ನಾಡು ಪ್ರದೇಶದಲ್ಲಿ ಕನ್ನಡ ಉಳಿಸಲು ನಾವೆಲ್ಲರೂ ಹೋರಾಟ ನಡೆಸುತ್ತಿದ್ದು, ಕಾರವಾರ ನಗರಸಭೆಯವರು ಕನ್ನಡ ಸಂಘಟನೆಯವರನ್ನು ದೂರವಿಟ್ಟಿರುವುದು ಸರಿಯಲ್ಲ. ನಗರಸಭೆ ಅಧಿಕಾರಿಗಳು ತಮ್ಮ ತಪ್ಪು ತಿದ್ದುಕೊಂಡು ಕನ್ನಡ ಸಂಘಟನೆಯವರನ್ನು ವಿಶ್ವಾಸಕ್ಕೆಪಡೆಯಬೇಕು.
– ದಿಲೀಪ ಅರ್ಗೇಕರ್, ಜಯ ಕರ್ನಾಟಕ ಜನಪರ ವೇದಿಕೆ