ಮನೆ ಮುಂದೆ ಅಳವಡಿಸಿದ್ದ ವಿದ್ಯುತ್ ದೀಪ ಹಚ್ಚಿದ ವಿಷಯವಾಗಿ ಟಿಬೇಟಿಯನ್ ಕಾಲೋನಿಯ ಬಳಿ ಅಣ್ಣ-ತಮ್ಮನ ನಡುವೆ ಜಗಳ ಶುರುವಾಗಿದ್ದು, ಈ ಜಗಳ ಹೊಡೆದಾಟದ ಸ್ವರೂಪಪಡೆದಿದೆ. ಪರಿಣಾಮ ನಿವೃತ್ತ ಎಸ್ಎಫ್ಎಫ್ ನೌಕರ ಕರ್ಮಾ ಗ್ಯಾಲ್ಸ್ಟನ್ ಅವರ ಕೊಲೆಯಾಗಿದೆ.
ಟಿಬೇಟಿಯನ್ ಕ್ಯಾಂಪ್ ನಂ. 7ರಲ್ಲಿ ಈ ಕೊಲೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಕೋಪದ ಭರದಲ್ಲಿ ನಿವೃತ್ತ ಎಸ್ಎಫ್ಎಫ್ ನೌಕರ ಕರ್ಮಾ ಗ್ಯಾಲ್ಸ್ಟನ್ ಅವರು ಅವರ ಸಹೋದರರಿಂದಲೇ ಸಾವನಪ್ಪಿದ್ದಾರೆ. ಕೊಲೆ ಆರೋಪಿ ಸೋನಂ ತ್ಸೆರಿಂಗ್ ಸಹ ನಿವೃತ್ತ ಎಸ್ಎಫ್ಎಫ್ ನೌಕರರಾಗಿದ್ದಾರೆ. ಮಾಹಿತಿಗಳ ಪ್ರಕಾರ, ರಾತ್ರಿ ಕುಟುಂಬದವರೆಲ್ಲ ಊಟ ಮುಗಿಸಿ ಮಲಗಲು ತೆರಳಿದ್ದರು. ಲಖ್ಪಾ ಡೋಲ್ಮಾ (30) ಹಾಗೂ ಅವರ ತಾಯಿ ಒಂದು ಕೋಣೆಯಲ್ಲಿ ಮಲಗಿದ್ದರೆ ಮತ್ತೊಂದು ಕೋಣೆಯಲ್ಲಿ ಅತ್ತಿಗೆ ಮತ್ತು ಮೂವರು ಮಕ್ಕಳು ಮಲಗಿದ್ದರು. ಈ ನಡುವೆ ಕರ್ಮಾ ಗ್ಯಾಲ್ಸ್ಟನ್ ತಡರಾತ್ರಿ ಮನೆಗೆ ಬಂದು ಅಡುಗೆ ಕೋಣೆಯಲ್ಲಿ ಆಹಾರವನ್ನು ಬಿಸಿ ಮಾಡಿಕೊಳ್ಳುತ್ತಿದ್ದರು.
ನವೆಂಬರ್ 27ರ ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ಮನೆಗೆ ಬಂದ ದೊಡ್ಡಣ್ಣ ಸೋನಂ ತ್ಸೆರಿಂಗ್, `ಇಷ್ಟು ತಡರಾತ್ರಿಯಾದರೂ ಮನೆಯಲ್ಲಿ ವಿದ್ಯುತ್ ದೀಪ ಏಕೆ ಹಾಕಿದ್ದೀಯಾ? ಎಂದು ಪ್ರಶ್ನಿಸಿದ್ದಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆಕ್ರೋಶಗೊಂಡ ಕರ್ಮಾ ಗ್ಯಾಲ್ಸ್ಟನ್ ಅಡುಗೆ ಮನೆಯಲ್ಲಿದ್ದ ಗ್ಲಾಸ್ ಎಸೆದು, ಬಳಿಕ ಅಲ್ಲಿಯೇ ಇದ್ದ ಚಾಕುವಿನಿಂದ ಅಣ್ಣನಿಗೆ ಇರಿಯಲು ಯತ್ನಿಸಿದ್ದಾರೆ. ಈ ವೇಳೆ ಸೋನಂ ತ್ಸೆರಿಂಗ್ ತಮ್ಮನ ಕೈಯಲ್ಲಿದ್ದ ಚಾಕುವನ್ನು ಕಸಿದುಕೊಂಡು ಅದೇ ಚಾಕುವಿನಿಂದ ಕರ್ಮಾ ಗ್ಯಾಲ್ಸ್ಟನ್ ಅವರಿಗೆ ಚುಚ್ಚಿದ್ದಾರೆ. ಇದರಿಂದ ತೀವ್ರ ರಕ್ತಗಾಯಗೊಂಡ ಕರ್ಮಾ ಗ್ಯಾಲ್ಸ್ಟನ್ ಅಲ್ಲಿಯೇ ಕುಸಿದು ಬಿದ್ದು ಸಾವನಪ್ಪಿದ್ದಾರೆ.