ಶಿರಸಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜಕುಮಾರ ಅಭಿನಯದ `ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂಬ ಹಾಡು ಮೊಳಗಿದ್ದು, ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಹಾಡಿನ ಜೊತೆ ಕುಣಿದು ಕುಪ್ಪಳಿಸಿದರು.
Advertisement. Scroll to continue reading.
ಶಿರಸಿಯ ಮಾರಿಕಾಂಬಾ ಶಾಲೆಯಲ್ಲಿ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಸಾವಿರಾರು ವಿದ್ಯಾರ್ಥಿಗಳು ಕನ್ನಡ ಕಲರವ ಮೊಳಗಿಸಿದರು. `ಕನ್ನಡದಲ್ಲಿಯೇ ಮಾತನಾಡಿ.. ಕನ್ನಡದಲ್ಲಿಯೇ ವ್ಯವಹರಿಸಿ’ ಎಂದು ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ `ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಅವರು ಹೆಜ್ಜೆ ಹಾಕಿ ಸಂಭ್ರಮಿಸಿದರು. `ರಾಜ್ಯ ಸರ್ಕಾರ ಕನ್ನಡಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಎಲ್ಲರಿಗೂ ಉಚಿತ ಶಿಕ್ಷಣ ನೀಡುತ್ತಿದೆ. ಕನ್ನಡ ಭಾಷೆ ಎಂದೆoದಿಗೂ ಅಮರವಾಗಿರಬೇಕು’ ಎಂದು ಭೀಮಣ್ಣ ನಾಯ್ಕ ಅವರು ಹೇಳಿದರು.
ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತೆ ಕೆವಿ ಕಾವ್ಯಾರಾಣಿ ಅವರು `ಕದಂಬರ ನಾಡಿನಲ್ಲಿ ಉಪವಿಭಾಗಾಧಿಕಾರಿಯಾಗಿ ಧ್ವಜಾರೋಹಣ ಮಾಡುತ್ತಿರುವುದು ಅತ್ಯಂತ ಹೆಮ್ಮೆ ತಂದಿದೆ’ ಎಂದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಗಣಪತಿ ಭಟ್ಟ, ಜಿ ಎಂ.ಬೊಮ್ನಳ್ಳಿ, ಕದಂಬ ರತ್ನಾಕರ, ಅನುರಾಧಾ ಹೆಗಡೆ, ಮಧುಕೇಶ್ವರ ನಾಯ್ಕ ಅವರನ್ನು ಗೌರವಿಸಲಾಯಿತು.