3 ಲಕ್ಷ ರೂ ಬೆಳೆ ಸಾಲ ಮಾಡಿದ್ದ ಮುಂಡಗೋಡಿನ ಶಂಕ್ರಪ್ಪ ಗುಡಗೇರಿ ಅವರು ಫಸಲು ಕೈಕೊಟ್ಟ ಕಾರಣ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ನೇಣು ಹಾಕಿಕೊಂಡಿದ್ದ ಅವರನ್ನು ಬಿಡಿಸಿ ಆಸ್ಪತ್ರೆಗೆ ಕರೆದೊಯ್ದರೂ ಅವರ ಪ್ರಾಣ ಉಳಿಯಲಿಲ್ಲ.
ಮುಂಡಗೋಡದ ಬಾಚಣಕಿ ಗ್ರಾಮದ ಶಂಕ್ರಪ್ಪ ಶಿವಪ್ಪ ಗುಡಗೇರಿ (50) ಅವರು ಮುಂಡಗೋಡ ಪ್ರಾಥಮಿಕ ಸಹಕಾರಿ ಸಂಘದಲ್ಲಿ 299900ರೂ ಬೆಳೆ ಸಾಲಪಡೆದಿದ್ದರು. ಆ ಸಾಲವನ್ನು ವಿನಿಯೋಗಿಸಿ ಫಸಲು ಬೆಳೆದಿದ್ದರು. ಆದರೆ, ವಿಪರೀತ ಮಳೆ ಕಾರಣದಿಂದ ಫಸಲು ಕೈಗೆ ಬಂದಿರಲಿಲ್ಲ. ಬೆಳೆ ಸಾಲ ತುಂಬಲು ಸಾಧ್ಯವಾಗುವುದಿಲ್ಲ ಎಂಬ ಆತಂಕದಿoದಲೇ ಅವರು ಆತ್ಮಹತ್ಯೆಯ ಹಾದಿ ತುಳಿದರು.
ಮಂಗಳವಾರ ಮನೆ ಅಂಚಿನ ದನದ ಕೊಟ್ಟಿಗೆಗೆ ಹೋಗಿದ್ದ ಶಂಕ್ರಪ್ಪ ಅವರು ಅಲ್ಲಿಯೇ ಆತ್ಮಹತ್ಯೆಯ ನಿಧಾರ ಮಾಡಿದರು. ಅಲ್ಲಿಂದ ಹಗ್ಗದಿಂದ ಅವರು ನೇಣು ಹಾಕಿಕೊಂಡಿದ್ದನ್ನು ನೋಡಿ ಕುಟುಂಬದವರು ಬಿಡಿಸಿದರು. ಇನ್ನೂ ಜೀವವಿರಬಹುದು ಎಂದು ಅಂದಾಜಿಸಿ ಕೈ-ಕಾಲು ತಿಕ್ಕಿದರು. ಆದರೆ, ಅಷ್ಟರೊಳಗೆ ಶಂಕ್ರಪ್ಪ ಅವರು ಉಸಿರಾಟ ನಿಲ್ಲಿಸಿದ್ದರು. ಶಂಕ್ರಪ್ಪ ಅವರ ಸಿದ್ಧರೂಡಾ ಗುಡಗೇರಿ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.