ನಿಧಿ ಆಸೆಗಾಗಿ ದುರುಳರು ಶಿರಸಿಯ ಐತಿಹಾಸಿಕ ಸೋಂದಾ ಕೋಟೆ ಕೊರೆದಿದ್ದಾರೆ. ಕೋಟೆಯ ಆಳಕ್ಕೆ 5 ಅಡಿ ಕೊರೆಯಲಾಗಿದ್ದು, ನಿಧಿ ಸಿಗದೇ ದುಷ್ಟರು ಮರಳಿದ್ದಾರೆ!
ಶಿರಸಿಯಿಂದ 17ಕಿಮೀ ದೂರದಲ್ಲಿ ಸೋಂದಾ ಕೋಟೆಯಿದೆ. ಪುರಾತತ್ವ ಇಲಾಖೆ ಅಧೀನದಲ್ಲಿ ಈ ಕೋಟೆ ಬರುತ್ತದೆ. 24 ಎಕರೆ ಪ್ರದೇಶದಲ್ಲಿರುವ ಈ ಕೋಟೆಯನ್ನು 1542ರಲ್ಲಿ ನಿರ್ಮಿಸಿದ ಬಗ್ಗೆ ದಾಖಲೆಗಳಿವೆ. ನಿರ್ವಹಣೆ ಕೊರತೆಯಿಂದ ಕೋಟೆ ಅಸ್ತವಸ್ಥವಾಗಿದ್ದು, ಇಲ್ಲಿ ನಿಧಿ ಇದೆ ಎಂಬ ವದಂತಿ ಮೊದಲಿನಿಂದಲೂ ಕೇಳಿ ಬರುತ್ತಿದೆ.
2023ರಲ್ಲಿ ಸಹ ಒಮ್ಮೆ ದುರುಳರು ನಿಧಿ ಆಸೆಗಾಗಿ ಕೋಟೆಗೆ ಭಗ್ನ ತಂದಿದ್ದರು. ಕೋಟೆಯ ಅನೇಕ ಕಡೆ ಅಗೆದು ಶೋಧ ನಡೆಸಿದ್ದರು. ಅದಾದ ನಂತರ ಪುರಾತತ್ವ ಇಲಾಖೆ ಕೋಟೆ ಕಾವಲಿಗೆ ಅಧಿಕಾರಿ ನೇಮಿಸಿದ್ದು, ಅದರ ನಡುವೆಯೂ ಸದ್ಯ ಕಳ್ಳರು ಮತ್ತೊಮ್ಮೆ ಕೊಟೆಯ ಬುಡಕ್ಕೆ ಕೈ ಹಾಕಿದ್ದಾರೆ.
ವಾರದ ಹಿಂದೆ ಕೋಟೆ ಅಗೆದ ಅನುಮಾನಗಳಿವೆ. ಕೋಟೆಯಲ್ಲಿರುವ ಕಲ್ಲಿನ ಮಂಚದ ಅಡಿ ಅಗೆಯಲಾಗಿದ್ದು, ಅಲ್ಲಿಯೇ ಮಣ್ಣಿನ ರಾಶಿ ಬಿದ್ದಿದೆ. ಪುರಾತತ್ವ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.