ಕಾರವಾರ ನಗರದ ಫ್ಲೈಓವರ್ ಅಡಿ ನಿಲ್ಲಿಸಿದ್ದ ಹಾಲಿನ ವಾಹನ ಏಕಾಏಕಿ ಅಗ್ನಿಗೆ ಆಹುತಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.
ಕಾರವಾರ ತಾಮ್ಸೇವಾಡದ ಸಂತೋಶಿ ಸತೀಶ್ ಚೀಪ್ಕರ್ ಅವರು ಶನಿವಾರ ಬೆಳಗ್ಗೆ ಹೆದ್ದಾರಿ ಮೇಲ್ಸೆತುವೆ ಅಡಿ ಭಾಗದ ಟಾಟಾ 407 ವಾಹನ ನಿಲ್ಲಿಸಿದ್ದರು. ಆ ವಾಹನದ ಇಂಜಿನ್ ದೋಷ ಕಾಣಿಸಿಕೊಂಡಿದ್ದು, ಚಿಕ್ಕದಾಗಿ ಬೆಂಕಿ ಬಂದಿತು. ಅದೇ ಜ್ವಾಲೆ ಕ್ರಮೇಣ ದೊಡ್ಡದಾಗಿದ್ದು, ಕ್ಷಣಮಾತ್ರದಲ್ಲಿ ಇಡೀ ವಾಹನವನ್ನು ಆವರಿಸಿತು.
ಹೆದ್ದಾರಿ ಅಂಚಿನಲ್ಲಿ ಹಾಲಿನ ವಾಹನ ಹೊತ್ತಿ ಉರಿಯುತ್ತಿರುವ ಸುದ್ದಿ ಕೇಳಿ ಅಗ್ನಿಶಾಮಕ ಸಿಬ್ಬಂದಿ ಅಲ್ಲಿಗೆ ಧಾವಿಸಿದರು. ತಮ್ಮ ರಕ್ಷಣಾ ತಂತ್ರಗಳ ಮೂಲಕ ವಾಹನದ ಬೆಂಕಿ ಆರಿಸಿದರು. ಈ ವೇಳೆ ಆ ವಾಹನದಲ್ಲಿ ಯಾರೂ ಇಲ್ಲದ ಕಾರಣ ಜೀವ ಹಾನಿ ಸಂಭವಿಸಲಿಲ್ಲ.
ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀಕಾಂತ ರಾಥೋಡ್ ಅವರು ಸ್ಥಳಕ್ಕೆ ದೌಡಾಯಿಸಿ ಬಂದರು. ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದನ್ನು ನೋಡಿ ಅದನ್ನು ಪೊಲೀಸರು ನಿಯಂತ್ರಿಸಿದರು.