ಯಲ್ಲಾಪುರದ ಉಮ್ಮಚ್ಗಿಯಲ್ಲಿ ದುರುಳರು ಬ್ಯಾಂಕಿಗೆ ಬೆಂಕಿ ಹಚ್ಚಿದ್ದಾರೆ. ಬ್ಯಾಂಕ್ ಒಳಗಿದ್ದ ಕಂಪ್ಯುಟರ್ ಹಾಗೂ ವಿವಿಧ ದಾಖಲೆಗಳು ಸುಟ್ಟು ಕರಕಲಾಗಿದೆ.
ಇಲ್ಲಿನ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕಿನ ಒಳಭಾಗದಲ್ಲಿ ಬೆಂಕಿ ಉರಿದಿದ್ದು, ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬುಧವಾರ ನಸುಕಿನಲ್ಲಿ ದರೋಡೆಕೋರರು ಬ್ಯಾಂಕ್ ಆವರಣ ಪ್ರವೇಶಿಸಿದ್ದಾರೆ. ಕಿಟಕಿ ಮುರಿದು ಬ್ಯಾಂಕ್ ಒಳಗೆ ನುಗ್ಗಿದ್ದಾರೆ. ಸೇಫ್ ಲಾಕರ್ ಒಡೆಯುವ ಪ್ರಯತ್ನ ನಡೆಸಿದಾಗ ಬ್ಯಾಂಕಿನ ಸೈರನ್ ಸದ್ದು ಮಾಡಿದೆ. ಆಗ, ದುಷ್ಕರ್ಮಿಗಳು ಬ್ಯಾಂಕಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಬ್ಯಾಂಕ್ ಕಟ್ಟಡದಿಂದ ಹೊಗೆಯಾಡುವುದನ್ನು ನೋಡಿದ ಜನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಜೊತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಕೆಲಸ ಮಾಡಿದ್ದಾರೆ. ಈ ವೇಳೆ ಕಿಟಕಿ ತುಂಡಾಗಿರುವುದು ಗೊತ್ತಾಗಿದ್ದು, ಅಲ್ಲಿಂದ ಕಳ್ಳರು ಬ್ಯಾಂಕ್ ಒಳಗೆ ಪ್ರವೇಶಿಸಿ ದುಷ್ಕೃತ್ಯ ನಡೆಸಿದ್ದು ಬಹಿರಂಗವಾಗಿದೆ.
ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಯಲ್ಲಾಪುರ ಪಿಐ ರಮೇಶ ಹಾನಾಪುರ ಅವರು ತಂಡ ಕಟ್ಟಿಕೊಂಡು ದುಷ್ಟರ ಶೋಧ ಶುರು ಮಾಡಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಬೆಂಕಿ ಹಚ್ಚಿದವರು ಸಿಕ್ಕಿಬೀಳುವ ಸಾಧ್ಯತೆ ಹೆಚ್ಚಿದೆ.