ಹೊನ್ನಾವರದ ಗುಂಡುಬಾಳದಲ್ಲಿ ಸರ್ಕಾರಿ ಬಸ್ಸು ಮೂರು ದಿನದಿಂದ ರಸ್ತೆ ನಡುವೆ ಕೆಟ್ಟು ನಿಂತಿದ್ದು, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಕುಮಟಾ ಡಿಪೋ ಮ್ಯಾನೇಜರ್’ಗೆ ಫೋನ್ ಮಾಡಿದ್ದಾರೆ. ಅದಾದ ನಂತರ ಬಸ್ಸು ಅಲ್ಲಿಂದ ಡಿಪೋಗೆ ಚಲಿಸಿದೆ!
ಕುಮಟಾ ಬಸ್ ಡಿಪೋದ ಬಸ್ಸು ಹೊನ್ನಾವರ ಭಾಗದಲ್ಲಿ ಸಂಚರಿಸುತ್ತದೆ. ಹೊನ್ನಾವರದಲ್ಲಿ ವಸತಿಹೂಡಿ ಮರುದಿನ ಗುಂಡುಬಾಳ-ಹಿರೇಬೈಲ್ ಮಾರ್ಗದ ಮೂಲಕ ಕುಮಟಾಗೆ ಬರುತ್ತದೆ. ಹೀಗೆ ಶನಿವಾರ ಹೊನ್ನಾವರದಿಂದ ಮರಳಬೇಕಿದ್ದ ಬಸ್ಸು ರಸ್ತೆ ನಡುವೆ ಹಾಳಾಗಿದ್ದು, ಅದರ ಬಗ್ಗೆ ಯಾವ ಅಧಿಕಾರಿಯೂ ಕಾಳಜಿವಹಿಸಲಿಲ್ಲ. ಹೀಗಾಗಿ ಆ ಬಸ್ಸು ಮೂರು ದಿನ ಕಳೆದರೂ ಡಿಪೋ ಕಡೆ ಹೋಗಲಿಲ್ಲ.
ಸಾರ್ವಜನಿಕರು ಓಡಾಡುವ ರಸ್ತೆ ಮೇಲೆ ಬಸ್ಸು ರಸ್ತೆ ಮೇಲೆ ನಿಂತ ಪರಿಣಾಮ ಇತರೆ ವಾಹನಗಳ ಓಡಾಟ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಜನ ಸಮಸ್ಯೆ ಅನುಭವಿಸಿದರು. ಕಾಲೇಜು ವಿದ್ಯಾರ್ಥಿಗಳ ಬೈಕ್ ಓಡಾಟಕ್ಕೂ ಬಸ್ಸು ಅಡ್ಡಿಯಾಯಿತು. ರಿಕ್ಷಾ-ಕಾರು ಸಂಚಾರ ಅಸ್ತವ್ಯಸ್ಥವಾಯಿತು. ಮೂರು ದಿನ ಕಳೆದರೂ ಬಸ್ಸು ಅಲ್ಲಿಯೇ ನಿಂತ ಬಗ್ಗೆ ಸ್ಥಳೀಯರು ಕುಮಟಾ ಡಿಪೋ ಮ್ಯಾನೇಜರ್ ವಿನಾಯಕ ಅವರಿಗೆ ಫೋನ್ ಮಾಡಿದರು. ಮೊದಲು ಕರೆ ಸ್ವೀಕರಿಸಿದ ಡಿಪೋ ಮ್ಯಾನೇಜರ್ ನಂತರ `ಮಿಟಿಂಗ್ಲಿದ್ದೇನೆ’ ಎಂದು ಹೇಳಿದರು.
ಡಿಪೋ ಮ್ಯಾನೇಜರ್ ಉತ್ತರಕ್ಕೆ ತೃಪ್ತರಾಗದ ಜನ ನೇರವಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಫೋನ್ ಮಾಡಿದರು. `ಕೂಡಲೇ ಕ್ರಮ ಜರುಗಿಸುವೆ’ ಎಂದು ಸಚಿವರು ಉತ್ತರಿಸಿದರು. `ಕ್ರಮ ಜರುಗಿಸುವ ಮೊದಲು ಬಸ್ಸನ್ನು ಅಲ್ಲಿಂದ ಕದಲಿಸಿ’ ಎಂದು ಫೋನ್ ಮಾಡಿದವರು ಮನವಿ ಮಾಡಿದರು. ಅದಾದ ನಂತರ ಡಿಪೋ ಮ್ಯಾನೇಜರಿಂದಲೇ ಫೋನ್ ಬಂದಿದ್ದು, `ಕ್ರೇನ್ ಇಲ್ಲದ ಕಾರಣ ಬಸ್ಸು ಅಲ್ಲಿಯೇ ಇದೆ’ ಎಂಬ ಉತ್ತರ ಬಂದಿತು. ಸಚಿವರಿಂದ ಫೋನ್ ಬಂದ ಕೆಲ ಗಂಟೆಗಳಲ್ಲಿ ಕ್ರೇನ್ ಬಂದು ಆ ಬಸ್ಸನ್ನು ಕುಮಟಾ ಡಿಪೋದ ಒಳಗಿರುವ ಗ್ಯಾರೇಜಿಗೆ ಕರೆದೊಯ್ಯತು.
`ನಿನ್ನೆ ಸಂಜೆಯೇ ಬಸ್ಸನ್ನು ಡಿಪೋಗೆ ತರಲಾಗಿದೆ. ಬಸ್ಸಿನ ಸಮಸ್ಯೆ ಬಗೆಹರಿದಿದೆ’ ಎಂದು ಕುಮಟಾ ಡಿಪೋ ಮ್ಯಾನೇಜರ್ ವಿನಾಯಕ ಅವರು ಮೊಬೈಲ್ ಮಿಡಿಯಾ ನೆಟ್ವರ್ಕಗೆ ಪ್ರತಿಕ್ರಿಯಿಸಿದರು.