ದೂರ ದೃಷ್ಠಿಯ ವಿಚಾರಧಾರೆಗಳನ್ನು ಹೊಂದಿರುವ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರು ಸೋಮವಾರ ತಮ್ಮ `ದೂರದ ದೃಷ್ಠಿ’ ತಪಾಸಣೆಗೆ ಒಳಗಾಗಿದ್ದಾರೆ. ಕಣ್ಣು ಆರೋಗ್ಯದ ಬಗ್ಗೆ ವೈದ್ಯರು ಶಾಸಕರಿಗೆ ಮಾಹಿತಿ ನೀಡಿದ್ದಾರೆ.
ಗುಡ್ಡಗಾಡು ಜನರಿಗೆ ಸೇವೆ ಒದಗಿಸುವುದಕ್ಕಾಗಿ ಶಿರಸಿಯ ಸ್ಕೋಡ್‌ವೆಸ್ ಸಂಸ್ಥೆ `ನೇತ್ರ ರಥ’ ಎಂಬ ಸಂಚಾರಿ ಆರೋಗ್ಯ ಸೇವೆ ಶುರು ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಸಂಚಾರಿ ಕಣ್ಣಿನ ಆಸ್ಪತ್ರೆ ಇದಾಗಿದ್ದು, ಸೌರಶಕ್ತಿ ಬೆಂಬಲಿತ ಸೇವೆಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅತ್ಯಾಧುನಿಕ ಯಂತ್ರೋಪಕರಣಗಳಿAದ ಕೂಡಿದ ಹವಾ ನಿಯಂತ್ರಿತ ವಾಹನದಲ್ಲಿ ಕಣ್ಣಿನ ತಪಾಸಣೆ ನಡೆಸಿ, ಉಚಿತ ಕನ್ನಡಕ ಹಾಗೂ ಔಷಧಗಳ ವಿತರಣೆ ಮಾಡಲಾಗುತ್ತದೆ. ನುರಿತ ತಜ್ಞರಿಂದ ಚಿಕಿತ್ಸೆ ಕೊಡಲಾಗುತ್ತದೆ. ಈ ದಿನ ಶಿರಸಿಯ ಹುಲೆಕಲ್ ಭಾಗದಲ್ಲಿ ರಥ ಸಂಚಾರ ನಡೆದಿದ್ದು, ನೇತ್ರರಥ ವೀಕ್ಷಿಸಿದ ಶಾಂತರಾಮ ಸಿದ್ದಿ ಅವರು ಸ್ವತಃ ಪರೀಕ್ಷೆಗೆ ಒಳಗಾದರು.
ಅದಾದ ನಂತರ ಮಾತನಾಡಿದ ಅವರು `ಜನರ ಅಂಧತ್ವ ನಿವಾರಣೆ ಮಾಡುವಲ್ಲಿ ನೇತ್ರರಥ ಪ್ರಮುಖ ಪಾತ್ರವಹಿಸಲಿದೆ. ದಟ್ಟ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದ ಜನರು ದೃಷ್ಟಿ ಸಂಬoಧಿತ ಸಮಸ್ಯೆಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು 30-40ಕಿಮೀ ಕ್ರಮಿಸಬೇಕಿದ್ದು, ಈ ರಥ ಜನರ ಸಮಸ್ಯೆ ದೂರ ಮಾಡಲಿದೆ’ ಎಂದರು. `ಪಂಚಾಯಿತಿ ವ್ಯಾಪ್ತಿಗೆ ತೆರಳಿ ಉತ್ತಮವಾಗಿ ಸೇವೆ ನೀಡುವ ಈ ಸೇವೆ ಗ್ರಾಮೀಣ ಪ್ರದೇಶದ ಜನರಿಗೆ ಅತ್ಯಂತ ಉಪಯುಕ್ತವಾಗುತ್ತದೆ’ ಎಂದರು.
ಗುಜರಾತಿನ ದೇಸಾಯಿ ಫೌಂಡೇಶನ್ ಟ್ರಸ್ಟ್, ಬೆಂಗಳೂರಿನ ಆಧ್ಯನ್ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ವಿನೂತನವಾಗಿ ಸಂಚಾರಿ ಕಣ್ಣಿನ ಆಸ್ಪತ್ರೆ ಉದ್ಘಾಟಿಸಲಾಯಿತು. ಹುಲೇಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಸೀಂ ಸಾಬ್, ದೇಸಾಯಿ ಫೌಂಡೇಶನ್ ಟ್ರಸ್ಟ್ ಅಭಿವೃದ್ಧಿ ವಿಭಾಗದ ನಿರ್ದೇಶಕ ಮನೋಜ ಪಾಂಡಾ, ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಆಧ್ಯನ್ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥರಾದ ಅಂಜನಾ ಕಾವೂರು ಮತ್ತು ನಯನ ಜ್ಯೋತಿ ಟ್ರಸ್ಟ್ನ ಸಂಸ್ಥಾಪಕ ಟ್ರಸ್ಟಿ ಜಯರಾಮನ್ ಅವರು ಕಾರ್ಯಕ್ರಮದಲ್ಲಿದ್ದರು.
ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಕುಮಾರ ವಿ ಕೂರ್ಸೆ, ಕಾರ್ಯದರ್ಶಿ ಮತ್ತು ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್ ರವಿ, ಸಹ-ಕಾರ್ಯದರ್ಶಿ ಕೆ ಎನ್ ಹೊಸಮನಿ, ಕಾರ್ಯಕಾರಿ ಸದಸ್ಯರಾದ ದಯಾನಂದ ಅಗಾಸೆ, ಪ್ರತಿಭಾ ಭಟ್ ಹಾಗೂ ಹುಲೇಕಲ್ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯೋಗಿತಾ ಹೆಗಡೆ ಅವರು ಯೋಜನೆಯ ಮಹತ್ವದ ಬಗ್ಗೆ ಮಾತನಾಡಿದರು. ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ, ಕಾರ್ಯಕ್ರಮ ಅಧಿಕಾರಿ ನಾರಾಯಣ ಹೆಗಡೆ ಸಂಘಟಿಸಿದ್ದರು.