ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಾರು ಚಾಲಕ ನಾಗರಾಜ ಹೆಗಡೆ ಅವರು ಮಂಗಳವಾರ ಸಾವನಪ್ಪಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಚಿಕಿತ್ಸೆಪಡೆದರೂ ಚೇತರಿಸಿಕೊಳ್ಳದೇ ಕೊನೆಯುಸಿರೆಳೆದಿದ್ದಾರೆ.
ನಾಗರಾಜ ಹೆಗಡೆ ಅವರು ಶಿರಸಿಯ ನೇಗಾರ್ ಗ್ರಾಮದವರಾಗಿದ್ದರು. ಮೊದಲಿನಿಂದಲೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆಪ್ತರಾಗಿದ್ದ ಅವರು ಕಳೆದ ಐದು ವರ್ಷಗಳಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಾಹನ ಚಾಲಕರಾಗಿದ್ದರು. ಸಾದ್ಯವಾದಷ್ಟರ ಮಟ್ಟಿಗೆ ಸಂಸದರನ್ನು ಸಕಾಲದಲ್ಲಿ ಸರಿಯಾದ ಸ್ಥಳಕ್ಕೆ ತಲುಪಿಸುವಲ್ಲಿ ಅವರು ಕಾರಣರಾಗಿದ್ದು, ಅಪಘಾತರಹಿತ ಚಾಲನೆಯಿಂದ ಮೆಚ್ಚುಗೆಗಳಿಸಿದ್ದರು.
ಕಳೆದ ಎರಡು ತಿಂಗಳ ಹಿಂದೆ ನಾಗರಾಜ ಹೆಗಡೆ ಅವರಿಗೆ ಅನಾರೋಗ್ಯ ಕಾಡಿತು. ಜಾಂಡಿಸ್ ರೋಗಕ್ಕೆ ಒಳಗಾದ ಅವರು ದೀರ್ಘಕಾಲದ ರಜೆಪಡೆದಿದ್ದರು. ಜೊತೆಗೆ ರೋಗಕ್ಕೆ ಚಿಕಿತ್ಸೆಯನ್ನುಪಡೆಯುತ್ತಿದ್ದರು. ಸೋಮವಾರ ರಾತ್ರಿಯವರೆಗೂ ಅವರು ಕುಟುಂಬದವರ ಜೊತೆ ಕಾಲ ಕಳೆದಿದ್ದರು. ಮಂಗಳವಾರ ನಸುಕಿನಲ್ಲಿ `ನಾಗರಾಜ ಹೆಗಡೆ ಇನ್ನಿಲ್ಲ’ ಎಂಬ ಆಘಾತದ ಸುದ್ದಿ ಕೇಳಿಸಿತು.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾಗರಾಜ ಹೆಗಡೆ ಅವರ ಮನೆಗೆ ಭೇಟಿ ನೀಡಿ ನಾಗರಾಜ ಹೆಗಡೆ ಅಂತಿಮ ದರ್ಶನಪಡೆದರು. ಜೊತೆಗೆ ಕುಟುಂಬದವರಿಗೆ ಸಾಂತ್ವಾನ ಹೇಳಿದರು. `ವೃತ್ತಿಪರ ಚಾಲಕನ ಜೊತೆ ಉತ್ತಮ ವ್ಯಕ್ತಿಯಾಗಿಯೂ ಜೊತೆಗಿದ್ದ ನಾಗರಾಜ ಹೆಗಡೆ ಅವರ ಸಾವು ನೋವು ತಂದಿದೆ. ಅವರ ಸೇವೆ, ಸೌಜನ್ಯ ಹಾಗೂ ಕರ್ತವ್ಯ ನಿಷ್ಠೆ ಸದಾ ಸ್ಮರಣೀಯ’ ಎಂದು ಹೇಳುತ್ತ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾವುಕರಾದರು.