ಕೂಲಿ ಕೆಲಸಕ್ಕೆ ತೆರಳಿದ್ದ ದೇವು ಗೌಡ ಅವರಿಗೆ ಹಾವು ಕಚ್ಚಿದ್ದು, ಅದೇ ಹಾವನ್ನು ಹಿಡಿದು ಅವರು ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿ ದೇವು ಗೌಡ ಅವರ ಆತಂಕ ದೂರ ಮಾಡಿದ್ದಾರೆ.
ಗೋಕರ್ಣ ಬಳಿಯ ಬಿಜ್ಜೂರಿನ ದೇವು ಗೌಡ (38) ಅವರು ಮಂಗಳವಾರ ಅಂಕೋಲಾದ ತಿಂಗಳಬೈಲ್ ಬಳಿ ಕೂಲಿ ಕೆಲಸಕ್ಕೆ ಹೋಗಿದ್ದರು. ಸಂಜೆ ವೇಳೆ ಅಲ್ಲಿ ಅವರಿಗೆ ಹಾವೊಂದು ಕಚ್ಚಿತು. ನಂತರ ಆ ಹಾವು ಪೊದೆ ಹಿಂದೆ ಹೋಯಿತು. ಆದರೆ, ಕಚ್ಚಿದ ಹಾವು ಯಾವುದು? ಎಂದು ಅವರಿಗೆ ಗೊತ್ತಾಗಲಿಲ್ಲ. ಆಸ್ಪತ್ರೆಗೆ ಹೋದರೂ `ಯಾವ ಹಾವು ಕಚ್ಚಿತು?’ ಎಂದು ಪ್ರಶ್ನಿಸಬಹುದು ಎಂದು ಊಹಿಸಿದ ಅವರು ಪೊದೊಯೊಳಗೆ ಹೋಗಿದ್ದ ಹಾವು ಹುಡುಕಿ ಹೊರ ತೆಗೆದರು.
ಆ ಹಾವನ್ನು ಅಲ್ಲಿಂದ ಹೊರ ತೆಗೆದು ಪ್ಲಾಸ್ಟಿಕ್ ಕೊಟ್ಟೆಯೊಳಗೆ ಹಾಕಿ ಆಸ್ಪತ್ರೆ ಕಡೆ ಹೊರಟರು. ಹಿಲ್ಲೂರಿನ ಆಸ್ಪತ್ರೆಗೆ ಬಂದಿದ್ದ ದೇವು ಗೌಡ ಅವರಿಗೆ ಅಲ್ಲಿನವರು ಚಿಕಿತ್ಸೆ ಕೊಟ್ಟರು. ಈ ವೇಳೆಗಾಗಲೇ ದೇವು ಗೌಡ ಅವರು ಅಸ್ವಸ್ಥಗೊಂಡಿದ್ದು, ಅಲ್ಲಿನ ವೈದ್ಯರು ಅವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ಕಳುಹಿಸಿದರು. 108 ಸಿಬ್ಬಂದಿ ದೇವು ಗೌಡರನ್ನು ಆಸ್ಪತ್ರೆಗೆ ಕರೆತಂದರು. ಅಂಕೋಲಾ ಆಸ್ಪತ್ರೆಯವರು ವಿವಿಧ ಬಗೆಯ ಚಿಕಿತ್ಸೆ ನೀಡಿ ಅವರನ್ನು ಕಾರವಾರ ಆಸ್ಪತ್ರೆಗೆ ಕಳುಹಿಸಿದರು.