ಆರು ವರ್ಷದ ಹಿಂದೆ ಕೃಷಿ ಇಲಾಖೆಯವರು ಕೃಷಿ ಹೊಂಡ ನಿರ್ಮಿಸಿದ್ದು, ಅದೇ ಹೊಂಡ ತೋರಿಸಿದ ಗ್ರಾಮ ಪಂಚಾಯತದವರು 1.49 ಲಕ್ಷ ರೂ ಹಣ ಹೊಡೆದಿದ್ದಾರೆ!
ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತದಲ್ಲಿ `ಬಿಲ್ ವಿದ್ಯೆ’ ಪ್ರಯೋಗ ನಡೆದಿದೆ. `ನಿಮಗೆ ಹೊಸದಾಗಿ ಬಾವಿ ಹೊಡೆದು ಕೊಡುತ್ತೇವೆ’ ಎಂದು ನಂಬಿಸಿದ ಗ್ರಾಮ ಪಂಚಾಯತದವರು ರೈತರ ಹೊಲದಲ್ಲಿ ಈಗಾಗಲೆ ಇದ್ದ ಕೃಷಿ ಹೊಂಡದ ಫೋಟೋ ತೆಗೆದಿದ್ದು, ಅದನ್ನೇ ಸರ್ಕಾರಿ ಕಡಕ್ಕೆ ಸೇರಿಸಿ ಬಿಲ್ ಮಾಡಿದ್ದಾರೆ. ರೈತರಿಗೂ ಅರಿವಿಗೆ ಬಾರದಂತೆ ರೈತನ ಹೆಸರಿನಲ್ಲಿ ಗ್ರಾಮ ಪಂಚಾಯತದವರು ಹಣ ಖರ್ಚು ಮಾಡಿದ್ದು, ತಮ್ಮ ಅರಿವಿಗೆ ಬರದೇ ತಮ್ಮ ಕ್ಷೇತ್ರದಲ್ಲಿ ಬಾವಿ ತೋಡಿದ ದಾಖಲೆ ಸೃಷ್ಠಿಸಿದನ್ನು ಅರಿತು ರೈತರು ಕಂಗಾಲಾಗಿದ್ದಾರೆ!
ಯಲ್ಲಾಪುರದ ವಜ್ರಳ್ಳಿ ಗ್ರಾಮ ಪಂಚಾಯತದ ಚಿಮ್ನಳ್ಳಿ ಬಳಿಯ ತೆಲಂಗಾರಿನಲ್ಲಿ 2017-18ರಲ್ಲಿ ಕೃಷಿ ಇಲಾಖೆಯವರು ಕೃಷಿ ಹೊಂಡ ನಿರ್ಮಿಸಿದ್ದರು. ರೈತ ಗಣೇಶ ಗಾಂವ್ಕರ್ ಅವರ ಮನವಿ ಮೇರೆಗೆ ಅಲ್ಲಿ ಕೃಷಿ ಹೊಂಡ ನಿರ್ಮಿಸಿದ್ದು, ಅದಕ್ಕೆ ಕೃಷಿ ಇಲಾಖೆಯವರು ಖರ್ಚು ಹಾಕಿದ್ದರು. ಆರು ವರ್ಷದ ನಂತರ ಅದೇ ಕೃಷಿ ಹೊಂಡ ತೋರಿಸಿದ ವಜ್ರಳ್ಳಿ ಗ್ರಾಮ ಪಂಚಾಯತದವರು `ಅದನ್ನು ನಾವು ಮಾಡಿದ್ದು’ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಆ ಹೊಂಡಕ್ಕೆ 1.49 ಲಕ್ಷ ರೂ ಖರ್ಚು ಹಾಕಿದ್ದಾರೆ. ಹೀಗಾಗಿ ಸರ್ಕಾರಿ ದಾಖಲೆಗಳ ಪ್ರಕಾರ ಒಂದೇ ಹೊಂಡಕ್ಕೆ ಎರಡು ಬಾರಿ ಖರ್ಚು ಬಿದ್ದಿದೆ!
ಸದ್ಯ ಕೃಷಿ ಸಹಾಯ ನಿರ್ದೇಶಕರು ಆ ಕೆರೆ ನಾವು ನಿರ್ಮಿಸಿದ್ದು ಎನ್ನುತ್ತಾರೆ. ಗ್ರಾಮ ಪಂಚಾಯತದವರು `ಅದು ಕೆರೆ ಅಲ್ಲ ಬಾವಿ. ಅದನ್ನು ತೋಡಿದ್ದು ನಾವು’ ಎನ್ನುತ್ತಾರೆ. ಆದರೆ ಸತ್ಯ ಅರಿತಿದ್ದ ಸ್ಥಳೀಯ ರೈತ ಗಣೇಶ ಗಾಂವ್ಕರ್ ಅವರು ಇದಕ್ಕೆ ತಕರಾರು ಸಲ್ಲಿಸಿದ್ದಾರೆ. ಆ ಅವಧಿಯಲ್ಲಿ `ನಿಮಗೆ ಬೇರೆ ಬಾವಿ ಮಾಡಿಕೊಡುತ್ತೇವೆ’ ಎಂದು ಗ್ರಾಮ ಪಂಚಾಯತದವರು ಮೊದಲು ಸಮಾಧಾನ ಮಾಡಿದ್ದು, ಈವರೆಗೂ ಬೇರೆ ಬಾವಿ ನಿರ್ಮಾಣ ನಡೆದಿಲ್ಲ. ಅದಾದ ನಂತರ ಗಣೇಶ ಗಾಂವ್ಕರ್ ಅವರೇ 66 ಸಾವಿರ ರೂ ಹಣಪಡೆದ ಬಗ್ಗೆ ಪೊರ್ಜರಿ ದಾಖಲೆ ಸೃಷ್ಠಿಸಿದ್ದಾರೆ. ಆ ಮೂಲಕ ಏನೂ ಅರಿಯದ ರೈತ ಈ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಬಿಂಬಿಸುವ ಪ್ರಯತ್ನ ನಡೆದಿದ್ದು, `ದೂರು ಕೊಟ್ಟರೇ ನೀನೇ ಸಿಕ್ಕಿ ಬೀಳುವೆ’ ಎಂದು ಬೆದರಿಸುವ ತಂತ್ರವನ್ನು ನಡೆಸಿದ್ದಾರೆ!
ಕೃಷಿ ಇಲಾಖೆಯವರು ಕೃಷಿ ಹೊಂಡ ನಿರ್ಮಿಸಲು 41841ರೂ ವೆಚ್ಚ ಮಾಡಿದ್ದು, ಅದೇ ಹೊಂಡಕ್ಕೆ ಗ್ರಾಮ ಪಂಚಾಯತದವರು 1.49 ಲಕ್ಷ ರೂ ಬಿಲ್ ಮಾಡಿದ್ದು ದಾಖಲೆಗಳಿಂದ ಸಾಭೀತಾಗಿದೆ. ಗ್ರಾಮ ಪಂಚಾಯತ ಅಧ್ಯಕ್ಷ ಭಗೀರಥ ನಾಯ್ಕ ಅವರ ಜೊತೆ ಸೇರಿ ಪಿಡಿಓ ಆಗಿದ್ದ ಸಂತೋಷಿ ಬಂಟ್, ತಾಂತ್ರಿಕ ಸಹಾಯಕಿ ಅನುಸೂಯಾ ಸಿದ್ದಿ, ವಜ್ರಳ್ಳಿ ಡಾಟಾ ಎಂಟ್ರಿ ಆಪರೇಟರ್ ಲಕ್ಷö್ಮಣ ಮರಾಠಿ ಅವರು ಈ ಅವ್ಯವಹಾರ ನಡೆಸಿರುವುದಾಗಿ ತನಿಖಾ ವರದಿ ವಿವರಿಸಿದೆ. ಹೀಗಾಗಿ ಗ್ರಾಮ ಪಂಚಾಯತ ಅಧ್ಯಕ್ಷ ಭಗೀರಥ ನಾಯ್ಕ, ಪಿಡಿಓ ಸಂತೋಷಿ ಬಂಟ್ ಜೊತೆ ಅನುಸೂಯಾ ಸಿದ್ದಿ ಅವರಿಗೆ ತಲಾ 43869ರೂ ಹಾಗೂ 14623ರೂ ಹಣ ಪಾವತಿಸುವಂತೆ ತನಿಖಾಧಿಕಾರಿಗಳು ಆದೇಶಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಮೊಬೈಲ್ ಮಿಡಿಯಾ ನೆಟ್‌ವರ್ಕ ನೀಡಿದ ಅರ್ಜಿಗೆ ಈ ದಾಖಲೆಗಳು ಸಿಕ್ಕಿವೆ.