ಹಳಿಯಾಳ ಪಟ್ಟಣದಲ್ಲಿ ಕಬ್ಬು ತುಂಬಿದ ಟಾಕ್ಟರ್ ಪಲ್ಟಿಯಾಗಿದ್ದರಿಂದ ಇನ್ನಿತರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಟಾಕ್ಟರ್ ಟ್ರಾಲಿ ಮೀರಿ ಕಬ್ಬು ತುಂಬಿರುವುದು ಈ ಅವಘಡಕ್ಕೆ ಕಾರಣವಾಗಿದೆ.
ಹಳಿಯಾಳ ಪಟ್ಟಣದ ಶಿವಾಜಿ ವೃತ್ತದಿಂದ ಸಕ್ಕರೆ ಕಾರ್ಖಾನೆಗೆ ತೆರಳುವ ಮಾರ್ಗದಲ್ಲಿ ಈ ಅವಘಡ ನಡೆದಿದೆ. ಕಬ್ಬಿನ ವಾಹನಗಳ ದಟ್ಟಣೆಯಿಂದಾಗಿ ಇಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ರಾತ್ರಿ ವೇಳೆ ಅವಘಡ ನಡೆದ ಪರಿಣಾಮ ಸಾವು-ನೋವು ಸಂಭವಿಸಿಲ್ಲ. ಅದಾಗಿಯೂ ವಾಹನ ಸಂಚಾರಕ್ಕೆ ಸಾಧ್ಯವಾಗದೇ ಜನ ಸಮಸ್ಯೆ ಅನುಭವಿಸಿದ್ದಾರೆ.
`ಸಕ್ಕರೆ ಕಾರ್ಖಾನೆಯವರ ಕುಮ್ಮಕ್ಕಿನಿಂದಲೇ ಟ್ರಾಫಿಕ್ ಜಾಮ್ ಸಮಸ್ಯೆಯು ತಲೆ ಎತ್ತಿದೆ. ಕಾರ್ಖಾನೆ ಹೊರಗೆ ತೂಕದ ಯಂತ್ರ ಸ್ಥಾಪನೆಗೆ ಒತ್ತಾಯಿಸದ ಕಾರಣ ಕಾರ್ಖಾನೆಯವರು ತಮ್ಮ ಹುಳುಕು ಮುಚ್ಚಿಕೊಳ್ಳಲು ಕೃತಕ ಟ್ರಾಫಿಕ್ ಜಾಮ್ ಹುನ್ನಾರ ನಡೆಸಿದ್ದಾರೆ. ಕಾರ್ಖಾನೆ ನೀಲನಕ್ಷೆ ಪ್ರಕಾರ ವಾಹನ ನಿಲುಗಡೆಗೆ ಸ್ಥಳ ಕೊಡಬೇಕು’ ಎಂದು ಕಬ್ಬು ಬೆಳೆಗಾರರ ಹಿತಸಂರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಆಗ್ರಹಿಸಿದ್ದಾರೆ.