ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಸರ್ಕಾರಿ ವಾಹನ ಚಾಲಕರೊಬ್ಬರು ಪತ್ನಿ ಜೊತೆ ಪರಾರಿಯಾಗಿದ್ದಾರೆ. ಹೊರಡುವ ಮುನ್ನ ಅವರು ತಮಗಾದ ಅನ್ಯಾಯ ವಿವರಿಸಿ ಆತ್ಮಹತ್ಯೆಯ ಪತ್ರ ಬರೆದಿದ್ದಾರೆ.
ಹೊನ್ನಾವರ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಮಂಜುನಾಥ ನಾಯ್ಕ ಅವರು ವಾಹನ ಚಾಲಕರಾಗಿದ್ದರು. ಅರಣ್ಯ ಅಧಿಕಾರಿಗಳ ಕಿರುಕುಳ ಸಹಿಸದೇ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದರು. ಆ ಪತ್ರಕ್ಕೆ ಅವರ ಪತ್ನಿ ವೀಣಾ ಪೂಜಾರಿ ಅವರು ಸಹಿ ಹಾಕಿದ್ದು, ಸದ್ಯ ಆ ದಂಪತಿ ಕಾಣುತ್ತಿಲ್ಲ.
ಕೆರೆಕೋಣದ ಮಂಜುನಾಥ ಗಣಪತಿ ನಾಯ್ಕ ಅವರು ಕಳೆದ 30 ವರ್ಷಗಳಿಂದ ಗೇರುಸೊಪ್ಪ ವಲಯ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಗೇರಸೊಪ್ಪಕ್ಕೆ ಕಾರ್ತಿಕ ಕಾಂಬ್ಳೆ ಅವರು ವಲಯ ಅರಣ್ಯಾಧಿಕಾರಿಯಾಗಿದ್ದು, ಅವರ ವಿರುದ್ಧ ವಾಹನ ಚಾಲಕ ಮಂಜುನಾಥ ನಾಯ್ಕ ಅವರು ಆರೋಪ ಮಾಡಿದ್ದಾರೆ. `ಚಾಲಕರಾಗಿರುವ ತಮಗೆ ಅಡುಗೆ ಕೆಲಸ ಮಾಡುವಂತೆ ಒತ್ತಡ ತರಲಾಗಿದೆ. ಅಡುಗೆ ಮಾಡಲು ಬರುವುದಿಲ್ಲ ಎಂದು ಹೇಳಿದರೂ ಬಿಡುತ್ತಿಲ್ಲ’ ಎಂಬುದು ಪತ್ರದ ಸಾರಾಂಶ.
`ಡಿಎಫ್‌ಓ ಯೋಗೀಶ ಅವರ ಬಳಿ ಹೇಳಿದರೂ ಸಮಸ್ಯೆ ಬಗೆಹರಿದಿಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಅವರು `ಪಿಸೈ ಆಗಿರುವ ಪತ್ನಿ ಮೂಲಕ ಸುಳ್ಳು ಪ್ರಕರಣ ದಾಖಲಿಸುವೆ’ ಎಂದು ಆರ್‌ಎಫ್‌ಓ ಕಾರ್ತಿಕ ಕಾಂಬ್ಳೆ ಬೆದರಿಸಿದ ಬಗ್ಗೆ ಉಲ್ಲೇಖಿಸಿದ್ದಾರೆ. `ಈ ಪತ್ರ ತಮಗೆ ತಲುಪುವಷ್ಟರಲ್ಲಿ ನಾವು ಜೀವಂತವಾಗಿರುವುದಿಲ್ಲ’ ಎಂದು ಅವರು ಬರೆದಿದ್ದು, ದಂಪತಿಗಾಗಿ ಹುಡುಕಾಟ ನಡೆದಿದೆ.