ಅಂಕೋಲಾ ಕೇಣಿಯ ಶ್ಯಾಮ ಬಂಟ ಅವರು ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದು, ಪುರಸಭೆ ಮಾಜಿ ಸದಸ್ಯ ಸಂದೀಪ ಬಂಟ್ ಅವರು ಮಟ್ಕಾ ಬುಕ್ಕಿಯಾಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಅಲ್ಲಿನ ಪೊಲೀಸರು ಶ್ಯಾಮ ಬಂಟ ಅವರ ಜೊತೆ ಸಂದೀಪ ಬಂಟ ಅವರ ಹೆಸರನ್ನು ಸೇರಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಇದರಿಂದ ಸಂದೀಪ ಬಂಟ್ ಕೆಂಡಾಮoಡಲರಾಗಿದ್ದು, ಪೊಲೀಸರ ವಿರುದ್ಧವೇ ಅನೇಕ ಆರೋಪ ಮಾಡಿದ್ದಾರೆ!
Advertisement. Scroll to continue reading.
ನವೆಂಬರ್ 26ರಂದು ಕೇಣಿಯ ಗೂಡಂಗಡಿಕಾರ ಶ್ಯಾಮ ಗೋಪಿನಾಥ ಬಂಟ್ ಅವರು ಗಾಬೀತಕೇಣಿ ಕ್ರಾಸಿನ ಬಳಿ ಮಟ್ಕಾ ಆಡಿಸುತ್ತಿದ್ದರು. ಪಿಐ ಚಂದ್ರಶೇಖರ ಮಠಪತಿ ಅವರು ದಾಳಿ ನಡೆಸಿ ಮಟ್ಕಾ ಪರಿಕ್ಕರಗಳನ್ನು ವಶಕ್ಕೆಪಡೆದರು. ಈಚೆಗೆ ನಡೆದ ದಾಳಿಯಲ್ಲಿಯೇ ಅತಿ ದೊಡ್ಡ ಮೊತ್ತ ಎನ್ನುವಂತೆ ಪೊಲೀಸರಿಗೆ ಈ ವೇಳೆ 17910ರೂ ಸಿಕ್ಕಿತು. `ಈ ಹಣ ಯಾರಿಗೆ ಕೊಡುವೆ?’ ಎಂದು ಪ್ರಶ್ನಿಸಿದಾಗ ಶ್ಯಾಮ ಬಂಟ್ ಅವರು ಕೇಣಿಯ ಸಂದೀಪ ಬಂಟ್ ಅವರ ಹೆಸರು ಹೇಳಿದರು. ಈ ಹಿನ್ನಲೆ ಪೊಲೀಸರು ಮಟ್ಕಾ ಆಡಿಸುತ್ತಿದ್ದ ಶ್ಯಾಮ ಬಂಟ್ ಅವರ ಜೊತೆ ಪುರಸಭೆ ಮಾಜಿ ಸದಸ್ಯ ಸಂದೀಪ ಬಂಟ್ ಅವರ ಹೆಸರನ್ನು ದಾಖಲಿಸಿ ಪ್ರಕರಣ ದಾಖಲಿಸಿದರು.
ಈ ವಿಷಯ ಅರಿತ ಸಂದೀಪ ಬಂಟ್ ಕಾರವಾರಕ್ಕೆ ಆಗಮಿಸಿದರು. ಪೊಲೀಸರ ಅಪರಾತಪರದ ಬಗ್ಗೆ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದರು. `ಅಂಕೋಲಾ ಪಿಐ ಚಂದ್ರಶೇಖರ ಮಠಪತಿ ಅವರು ಓಸಿ-ಮಟ್ಕಾ ನಡೆಸುವವರಿಂದ ಹಣ ಪಡೆದು ಅದಕ್ಕೆ ಬೆಂಬಲ ನೀಡುತ್ತಿದ್ದಾರೆ’ ಎಂದು ದೂರಿದರು. `ತನಗೂ ದುಡ್ಡು ಕೊಡುವಂತೆ ಪೀಡಿಸಿದ್ದು, ಹಣ ಕೊಡದ ಕಾರಣ ತನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಎಲ್ಲಿಯೇ ಮಟ್ಕಾ ದಾಳಿ ನಡೆದರೂ ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ’ ಎಂದು ಆರೋಪಿಸಿದರು.