ಹೆರಿಗೆ ನೋವಿಗೆ ಹೆದರಿದ ಗರ್ಭಿಣಿಯೊಬ್ಬರಿಗೆ ಹೃದಯಘಾತವಾಗಿದೆ. ತೀವೃ ಪ್ರಮಾಣದ ಹೃದಯಘಾತದಿಂದ ರೋಹಿಣಿ ಹಣಬರ್ ಅವರು ಸಾವನಪ್ಪಿದ್ದಾರೆ. ರೋಹಿಣಿ ಅವರ ಹೊಟ್ಟೆಯೊಳಗಿದ್ದ ಹಸುಗೂಸನ್ನು ಸಹ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಜೊಯಿಡಾದ ಜಗಲಪೇಟೆಯಲ್ಲಿ ಮನೋಜ ಹಣಬರ್ ಅವರು ಹೆಸ್ಕಾಂ ಬಿಲ್ ಕಲೆಕ್ಟರ್ ಆಗಿದ್ದಾರೆ. ಅವರ ಪತ್ನಿ ರೋಹಿಣಿ ಹಣಬರ್ (29) ಅವರು ಗರ್ಭಧರಿಸಿದ್ದು, ಕೊನೆಕ್ಷಣದಲ್ಲಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವ ವೇಳೆ ಹೃದಯಘಾತದಿಂದ ಸಾವನಪ್ಪಿದ್ದಾರೆ. ರೋಹಿಣಿ ಹಣಬರ್ ಅವರು ತಮ್ಮ ಹುಟ್ಟು ಹಬ್ಬದ ದಿನದಂದೇ ಮಗುವಿಗೆ ಜನ್ಮ ಕೊಡಲು ಸಿದ್ಧರಾಗಿದ್ದು, ಹುಟ್ಟಿದ ದಿನವೇ ಅವರ ಬದುಕು ಕೊನೆಯಾಗಿದೆ. ರೋಹಿಣಿ ಹಣಬರ್ ಅವರನ್ನು ಉಳಿಸಿಕೊಳ್ಳಲು ಕುಟುಂಬದವರ ಜೊತೆ ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ.
ಡಿಸೆಂಬರ್ 9ರ ನಸುಕಿನ 4 ಗಂಟೆಗೆ ರೋಹಿಣಿ ಹಣಬರ್ ಅವರಿಗೆ ಹೆರಿಗೆ ನೋವು ಕಾಣಿಸಿತು. ತಕ್ಷಣ ಮನೋಜ ಹಣಬರ್ ಅವರು ಪತ್ನಿಯನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ರೋಹಿಣಿ ಹಣಬರ್ ಅವರನ್ನು ಧಾರವಾಡದ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಯಿತು.
ಡಾ. ಕೀರ್ತಿ ಅವರು ರೋಹಿಣಿ ಹಣಬರ್ ಅವರ ಜೊತೆಗಿದ್ದರು. ದಾಂಡೇಲಿಯಿAದ ಧಾರವಾಡಕ್ಕೆ ಹೋಗುತ್ತಿರುವಾಗ ರೋಹಿಣಿ ಹಣಬರ್ ಅವರ ಪ್ರಜ್ಞೆ ತಪ್ಪಿತು. ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದರೂ ಮಾತನಾಡಲಿಲ್ಲ. ತಕ್ಷಣ ಕುಟುಂಬದವರು ರೋಹಿಣಿ ಹಣಬರ್ ಅವರನ್ನು ಸಮೀಪದ ಹಳಿಯಾಳ ಆಸ್ಪತ್ರೆಗೆ ಕರೆದೊಯ್ದರು. ತುರ್ತು ನಿಗಾ ಘಟಕದಲ್ಲಿ ಅವರನ್ನು ದಾಖಲಿಸಿದರು. ವೈದ್ಯರು ರೋಹಿಣಿ ಹಣಬರ್ ಅವರಿಗೆ ನಿರಂತರ ಚಿಕಿತ್ಸೆ ನೀಡಿದರು. ಆದರೆ, 11 ಗಂಟೆ ವೇಳೆಗೆ ರೋಹಿಣಿ ಅವರು ಕೊನೆಯುಸಿರೆಳೆದರು.
ಪ್ರತಿಭಟನೆ:
ರೋಹಿಣಿ ಹಣಬರ್ ಅವರ ಸಾವಿಗೆ ವೈದ್ಯರ ನಿರ್ಲಕ್ಷ ಕಾರನ ಎಂದು ಅವರ ಸಂಬoಧಿಕರು ದೂರಿದ್ದಾರೆ. ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆ ನಂತರ ರೋಹಿಣಿ ಹಣಬರ ಅವರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ಬುಧವಾರ ರೋಹಿಣಿ ಹಣಬರ್ ಅವರ ಅಂತ್ಯಕ್ರಿಯೆ ನಡೆದಿದೆ. `ವೈದ್ಯರು ಸಕಾಲಕ್ಕೆ ಬಂದಿಲ್ಲ. ಗರ್ಭಿಣಿಯನ್ನು ನಸುಕಿನಲ್ಲಿ ಆಸ್ಪತ್ರೆಗೆ ಕರೆತಂದರೂ ವೈದ್ಯರು 8.30ರವರೆಗೆ ಬರಲಿಲ್ಲ. ವೈದ್ಯರ ನಿರ್ಲಕ್ಷದಿಂದ ರೋಹಿಣಿ ಹಣಬರ್ ಅವರು ಸಾವನಪ್ಪಿದ್ದಾರೆ’ ಎಂದು ಜನ ಪ್ರತಿಭಟನೆ ನಡೆಸಿದ್ದಾರೆ.