ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸಿಡುವ `ವಜ್ರಕೋಶ’ದಲ್ಲಿ ಸ್ಪೋಟ ಸಂಭವಿಸಿದೆ. ಈ ಬಗ್ಗೆ ನೌಕಾನೆಲೆ ಅಧಿಕೃತ ಮಾಹಿತಿ ನೀಡದಿದ್ದರೂ ಸ್ಪೋಟದ ತೀವೃತೆಗೆ ಅನತಿ ದೂರದಲ್ಲಿನ ಮನೆಗಳಲ್ಲಿ ಬಿರುಕು ಮೂಡಿದೆ.
ಅಂಕೋಲಾದ ಅಲಿಗೇರಿ ಬಳಿ ನೌಕಾನೆಲೆಯ ವಜ್ರಕೋಶ ಪ್ರದೇಶದಲ್ಲಿ ಸ್ಪೋಟದ ಬಗ್ಗೆ ಅಲ್ಲಿನವರು ಮಾಹಿತಿ ನೀಡಿದ್ದಾರೆ. ಸ್ಪೋಟದ ನಂತರ ದೊಡ್ಡ ಪ್ರಮಾಣದಲ್ಲಿ ಹೊಗೆ ಆಕಾಶದ ಕಡೆ ಸಂಚರಿಸಿದೆ. ಜೊತೆಗೆ ಮೂರು ಮನೆಗಳಲ್ಲಿ ಬಿರುಕು ಕಾಣಿಸಿದೆ. ಇದರಿಂದ ಜನ ಆತಂಕದಲ್ಲಿದ್ದಾರೆ.
2015ರ ನೌಕಾನೆಲೆಯ ವಜ್ರಕೋಶ ಶುರುವಾಗಿದ್ದು, ಅಲ್ಲಿ ದೇಶದ ರಕ್ಷಣೆಗೆ ಬೇಕಾದ ಮದ್ದುಗುಂಡು ಸಂಗ್ರಹಿಸಿಡಲಾಗುತ್ತದೆ. ಈ ವ್ಯಾಪ್ತಿ ಸಂಪೂರ್ಣ ನಿಷೇಧಿತ ಪ್ರದೇಶವಾಗಿದ್ದು, ಸಾಮಾನ್ಯ ಜನರಿಗೆ ಪ್ರವೇಶವಿಲ್ಲ. ಇಂಥ ಭದ್ರತಾ ವಲಯದಲ್ಲಿ ಸ್ಪೋಟವಾಗಿರುವುದು ಚರ್ಚೆಯ ವಿಷಯವಾಗಿದೆ. ಸ್ಪೋಟದ ಕಾರಣದ ಬಗ್ಗೆ ನೌಕಾನೆಲೆ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಳಭಾಗದಲ್ಲಿ ಕಾಮಗಾರಿಗಾಗಿ ಸ್ಪೋಟ ನಡೆಸಲಾಗಿದೆಯಾ? ಅಥವಾ ಬೇರೆ ಕಾರಣಕ್ಕೆ ಸ್ಪೋಟವಾಗಿದೆಯಾ? ಎನ್ನುವ ಮಾಹಿತಿಯೂ ಹೊರ ಬಂದಿಲ್ಲ.
ಸ್ಪೋಟದ ಶಬ್ದ ಹಾಗೂ ಹೊಗೆ ನೋಡಿದ ಜನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.