ದಣಿದು ಬಂದಿದ್ದ ಅಪರಿಚಿತರಿಗೆ ಹೊನ್ನಮ್ಮ ನಾಯ್ಕ ಅವರು ನೀರು ಕೊಟ್ಟು ಉಪಚರಿಸಿದ್ದು, ಉಪಕಾರ ಮಾಡಿದ ಅಜ್ಜಿಗೆ ಆಗಂತುಕರು ಅಪಕಾರ ಮಾಡಿದ್ದಾರೆ.
ಭಟ್ಕಳದ ಬೆಳಕೆ ಗರಡಿ ಹಿತ್ತಲು ಪ್ರದೇಶದಲ್ಲಿ ಹೊನ್ನಮ್ಮ ಮಾಧವ ನಾಯ್ಕ (70) ಅವರು ವಾಸವಾಗಿದ್ದಾರೆ. ಅವರ ಮನೆಗೆ ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಕೋರಿಯರ್ ಬಾಯ್ ಎಂದು ಪರಿಚಯಿಸಿಕೊಂಡಿದ್ದಾರೆ. `ಆನ್‌ಲೈನ್ ಮೂಲಕ ಬ್ಯಾಟರಿ ಬಂದಿದೆ’ ಎಂದು ಅವರು ವಿಳಾಸ ಹೇಳಿದ್ದಾರೆ. ಆಗ ಹೊನ್ನಮ್ಮ ನಾಯ್ಕ ಅವರು `ನಾನು ಬ್ಯಾಟರಿ ಬುಕ್ ಮಾಡಿಲ್ಲ. ನನ್ನ ಮಗಳು ಸಹ ಮಾಡಿಲ್ಲ’ ಎಂದಿದ್ದಾರೆ. `ನನ್ನ ಅಳಿಯ ಬ್ಯಾಟರಿ ಬುಕ್ ಮಾಡಿರಬೇಕು’ ಎಂದು ಹೇಳಿದ್ದಾರೆ.
ಆಗ, ಬೈಕಿನಲ್ಲಿದ್ದ ಅಪರಿಚಿತರು `ಕುಡಿಯಲು ನೀರು ಕೊಡಿ’ ಎಂದು ಮನವಿ ಮಾಡಿದ್ದಾರೆ. ದೂರದಿಂದ ಬಂದು ದಣಿದಿದ್ದವರನ್ನು ನೋಡಿದ ಅಜ್ಜಿ ಮಾನವೀಯ ಹಿನ್ನಲೆ ನೀರು ಕೊಟ್ಟು ಉಪಚರಿಸಿದ್ದಾರೆ. ಅದಾದ ನಂತರ ಆ ಅಪರಿಚಿತರು `ಇನ್ನಷ್ಟು ನೀರು ಬೇಕು’ ಎಂದಿದ್ದಾರೆ. ನೀರು ತರುವುದಕ್ಕಾಗಿ ತಿರುಗಿದಾಗ ಬೈಕಿನಲ್ಲಿದ್ದವರು ಅಜ್ಜಿಯ ಕತ್ತಿಗೆ ಕೈ ಹಾಕಿ ಚಿನ್ನದ ಸರ ಕದ್ದಿದ್ದಾರೆ.
ಆಘಾತಕ್ಕೆ ಒಳಗಾದ ಅಜ್ಜಿ ಕೂಗಿಕೊಂಡಿದ್ದು, ಸುತ್ತಲಿನ ಜನ ಜಮಾಯಿಸಿದ್ದಾರೆ. ಅವರೆಲ್ಲರೂ ಸೇರಿ ಕಳ್ಳರಿಬ್ಬರನ್ನು ಹಿಡಿಯುವ ಪ್ರಯತ್ನ ಮಾಡಿದರೂ ಪ್ರಯೋಜನ ಆಗಲಿಲ್ಲ. ಬೈಕಿನಲ್ಲಿದ್ದ ಕಳ್ಳರು ಶಿರೂರು ಟೋಲ್‌ಗೇಟ್ ಮಾರ್ಗವಾಗಿ ತಪ್ಪಿಸಿಕೊಂಡಿದ್ದಾರೆ. ವಿಷಯ ಅರಿತ ಡಿವೈಎಸ್ಪಿ ಮಹೇಶ್, ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಹಾಗೂ ಸಿಬ್ಬಂದಿ ಅಜ್ಜಿಯ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಜ್ಜಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದು, ಕಳ್ಳರನ್ನು ಹುಡುಕುವ ವಿಶ್ವಾಸವ್ಯಕ್ತಪಡಿಸಿದರು.