ಯಲ್ಲಾಪುರ-ಮುoಡಗೋಡು ರಸ್ತೆ ಅಂಚಿನಲ್ಲಿರುವ ದೇವರಕಾಡು ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದ ಯಲ್ಲಾಪುರದ ರವೀಂದ್ರ ನಗರ ನಿವಾಸಿಗಳನ್ನು ಒಳಗೊಂಡ ಗೆಳೆಯರ ಬಳಗದವರು ಭಾನುವಾರ ಅಲ್ಲಿದ್ದ ಕಸ-ಕಡ್ಡಿ ಆರಿಸಿದ್ದಾರೆ. ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಬಿದ್ದಿದ್ದು, ಅದನ್ನು ಸ್ವಚ್ಛಗೊಳಿಸುವಂತೆ ಬಳಗದವರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
Advertisement. Scroll to continue reading.
ಯಲ್ಲಾಪುರ-ಮುಂಡಗೋಡು ರಸ್ತೆಗೆ ಹೊಂದಿಕೊAಡು ರವೀಂದ್ರ ನಗರದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು `ದೇವರಕಾಡು’ ನಿರ್ಮಿಸಿದ್ದಾರೆ. ಯಲ್ಲಾಪುರ ಪಟ್ಟಣದಿಂದ 3ಕಿಮೀ ದೂರದಲ್ಲಿರುವ ಈ ಪ್ರದೇಶದಲ್ಲಿ ಅನಾಧಿಕಾಲದಿಂದಲೂ ದೇವಿಯ ಆಲಯವಿದೆ. ಸಾತೇರಿ ದೇವಿಯ ಗುಡಿಗೆ ಅನೇಕ ಭಕ್ತರು ಅಲ್ಲಿ ನಡೆದುಕೊಳ್ಳುತ್ತಿದ್ದು, ಆ ಪ್ರದೇಶದ ವಾತಾವರಣವನ್ನು ಸುಂದರವಾಗಿರಿಸಲು ರವೀಂದ್ರ ನಗರದ ಗೆಳೆಯರ ಬಳಗದವರು ಶ್ರಮಿಸಿದ್ದಾರೆ.
ಇಲ್ಲಿರುವ ಗುಹೆ ಆಕಾರದ ಪ್ರವೇಶ ದ್ವಾರ ಜನರ ಗಮನಸೆಳೆಯುತ್ತಿದೆ. ಆದರೆ, ಇಲ್ಲಿ ಪ್ರವೇಶಿಸುವ ಪ್ರವಾಸಿಗರು ಎಲ್ಲೆಂದರಲ್ಲಿ ಮದ್ಯದ ಬಾಟಲಿ ಎಸೆಯುತ್ತಿದ್ದಾರೆ. ಇಲ್ಲಿನ ಮಾಲಿನ್ಯ ಅರಿತ ಸ್ಥಳೀಯರು ಸೋಮೇಶ್ವರ ನಾಯ್ಕ ಅವರ ನೇತ್ರತ್ವದಲ್ಲಿ ಸ್ವಚ್ಛತೆಗಾಗಿ ಮನವಿ ಸಲ್ಲಿಸಿದ್ದರು. `ದೇವರ ಕಾಡಿನಲ್ಲಿ ನಿರ್ಮಿಸಿದ ಆಸನಗಳನ್ನು ಸರಿಯಾಗಿರಿಸಬೇಕು. ಅಲ್ಲಿನ ಮಾಲಿನ್ಯವನ್ನು ಸರಿಪಡಿಸಿ ಪ್ರವಾಸಿಗರಿಗೆ ಮುಜುಗರವಾಗುವುದನ್ನು ತಪ್ಪಿಸಬೇಕು’ ಎಂದು ಸುಜಯ ಮರಾಠಿ, ಸಾಜು ಜೋರೇ, ತೇಜೇಶ್ ಭೋವಿ ಹಾಗೂ ಮನು ಪೊಳ್ ಅವರು ಮನವಿ ಮಾಡಿದ್ದರು. ಆನಂದ್ ಭೋವಿ, ರಿಜ್ವಾನ್ ಶೈಖ್, ಷಣ್ಮುಖ ನಾಯ್ಕ, ನಂದನ್ ಮರಾಠಿ, ಮೋಹನ್ ಪಾಲೇಕಾರ್, ರೋಹಿತ್ ಸಾಲುಂಕೆ, ಗಿರೀಶ್ ಭೋವಿವಡ್ಡರ್, ಕುಮಾರ್ ವಾಲ್ಮೀಕಿ ಹಾಗೂ ರಾಜು ನಾಯ್ಕ ಅವರು ಈ ಬಗ್ಗೆ ಆಗ್ರಹಿಸಿದ್ದರು.
ಫೆಬ್ರವರಿಯಲ್ಲಿ ನಡೆಯುವ ಯಲ್ಲಾಪುರ ಜಾತ್ರೆಗೂ ಮುನ್ನ ಹೊರ ಮಂಗಳವಾರ ಪದ್ಧತಿ ಆಚರಣೆಯಲ್ಲಿದ್ದು, ಅದಕ್ಕೆ ಪೂರಕವಾಗಿ ಈ ಪ್ರದೇಶ ಸ್ವಚ್ಛ ಮಾಡಬೇಕು ಎಂದು ಸಂಕಲ್ಪಿಸಿದ ಸಮಾನ ಮನಸ್ಕರು ಭಾನುವಾರ ಶ್ರಮದಾನ ಮಾಡಿದರು. ಈ ದಿನ ಸೋಮೇಶ್ವರ ನಾಯ್ಕ ಅವರ ಜೊತೆಗೂಡಿ ರೋಹಿತ ಸಾಲಂಕೆ, ಹಿರೀಶ ಬೋವಿವಡ್ಡರ್, ತೇಜಸ್ ಬೋವಿವಡ್ಡರ್, ಮಸ್ತಫಾ ಶೇಕ್, ಮಂಜುನಾಥ ಬೋವಿವಡ್ಡರ್ ಹಾಗೂ ಗಣೇಶ ಮರಾಠಿ ಅವರು ಸ್ವಚ್ಛತಾ ಕಾರ್ಯ ನಡೆಸಿದರು. ಜಾತ್ರೆ ಪೂರ್ವದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಮತ್ತೊಮ್ಮೆ ಸ್ವಚ್ಚತೆ ನಡೆಸುವುದಾಗಿ ಅಲ್ಲಿದ್ದವರು ಮಾಹಿತಿ ನೀಡಿದರು.