ಉದ್ಯೋಗ ಕೊಡುವುದಾಗಿ ವಂಚನೆ, ಚೆಕ್ ಬೌನ್ಸ್ ಸೇರಿ ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಭಾಕರ ಹೆಗಡೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. 13 ವರ್ಷಗಳ ಕಾಲ ಅಡಗಿಕೊಂಡಿದ್ದ ಪ್ರಭಾಕರ ಹೆಗಡೆ ಅವರು ಇದೀಗ ಸಿಕ್ಕಿಬಿದ್ದಿದ್ದಾರೆ.
Advertisement. Scroll to continue reading.
ಯಲ್ಲಾಪುರದ ಮಾಗೋಡು ಬಳಿಯ ದೇವಿತಗ್ಗುವಿನಲ್ಲಿ ಪ್ರಭಾಕರ ತಿಮ್ಮಣ್ಣ ಹೆಗಡೆ (65) ಅವರು ವಾಸವಾಗಿದ್ದರು. ಉದ್ಯೋಗ ಕೊಡಿಸುವುದಾಗಿ ಹೇಳಿ ಅವರು ಅನೇಕರನ್ನು ವಂಚಿಸಿದ್ದರು. ಕೆಲವರಿಂದ ಕಾಸುಪಡೆದು ಚೆಕ್ ನೀಡಿ ಯಾಮಾರಿಸಿದ್ದರು. ಶಿರಸಿ, ಯಲ್ಲಾಪುರ, ಮಲ್ಲಾಪುರ ಸೇರಿ ವಿವಿಧ ಕಡೆ ಅವರು ಜನರನ್ನು ವಂಚಿಸಿದ ವರದಿಗಳಿವೆ. ಚೆಕ್ ಅಮಾನ್ಯ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದು, ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಲೇ ಪ್ರಭಾಕರ ಹೆಗಡೆ ಅವರು ತಲೆಮರೆಸಿಕೊಮಡಿದ್ದರು.
ಪೊಲೀಸರು ಸಾಕಷ್ಟು ಬಾರಿ ಪ್ರಭಾಕರ ಹೆಗಡೆ ಅವರ ಮನೆಯವರೆಗೂ ಹೋಗಿ ಬಂದಿದ್ದರು. ಪೊಲೀಸರು ಮನೆಗೆ ಹೋದಾಗ ಪ್ರಭಾಕರ ಹೆಗಡೆ ಅವರು ಅಲ್ಲಿರಲಿಲ್ಲ. ಮುಂಬೈ, ಚನೈ ಎಂದು ಸುಳ್ಳು ಹೇಳಿ ಅವರು ಪೊಲೀಸರ ದಿಕ್ಕು ತಪ್ಪಿಸುತ್ತಿದ್ದರು. 13 ವರ್ಷಗಳಿಂದಲೂ ಪೊಲೀಸರಿಗೆ ಸಿಗದೇ ಕಣ್ತಪ್ಪಿಸಿಕೊಂಡಿದ್ದ ಪ್ರಭಾಕರ ಹೆಗಡೆ ಅವರು ಮೊನ್ನೆ ಹುಬ್ಬಳ್ಳಿಗೆ ಹೋಗಿದ್ದರು.
ಸಿದ್ದಾಪುರ ಪಿಐ ಜೆ ಬಿ ತಿಪ್ಪೇಸ್ವಾಮಿ ಅವರಿಗೆ ಪ್ರಭಾಕರ ಹೆಗಡೆ ಹುಬ್ಬಳ್ಳಿಯಲ್ಲಿ ಅಲೆದಾಡುತ್ತಿರುವ ವಿಷಯ ಗೊತ್ತಾಯಿತು. ಪಿಎಸೈ ಶಾಂತಿನಾಥ ಪಾಸಾನೆ, ಗೀತಾ ಶಿರ್ಶಿಕರ್ ಅವರು ಪ್ರಭಾಕರ ಹೆಗಡೆ ಅವರ ಪತ್ತೆಗೆ ಕಾರ್ಯತಂತ್ರ ರೂಪಿಸಿದರು. ವಾರೆಂಟ್ ವಿಭಾಗದ ಪೊಲೀಸ್ ಸಿಬ್ಬಂದಿ ಚೇತನಕುಮಾರ ಅಲಗೇರಿ ಅವರ ಜೊತೆ ರಮೇಶ ಕುಡಲ್ ಹಾಗೂ ಭರತ ಕುಮಾರ್ ಸೇರಿ ಪ್ರಭಾಕರ ಹೆಗಡೆ ಅವರ ಹೆಡೆಮುರಿ ಕಟ್ಟಿದರು.