ಅರಣ್ಯ ಹಕ್ಕು ಗೊಂದಲದ ಬಗ್ಗೆ ಶಾಸಕ ಶಿವರಾಮ ಹೆಬ್ಬಾರ್ ಅಧಿವೇಶನದಲ್ಲಿ ಮಾತನಾಡಿದ್ದು, `ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ ಕುರಿತಾದ ಗೊಂದಲ ಬಗೆಹರಿಸಲು ಶಾಸಕರು ಹಾಗೂ ಅರಣ್ಯ ಹಕ್ಕು ಹೋರಾಟ ಸಂಘಟನೆಗಳ ಜೊತೆ ಸಭೆ ಆಯೋಜಿಸಬೇಕು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ಒಕ್ಕೂಟಗಳ ರಾಜ್ಯ ಸಮಿತಿ ಸಂಚಾಲಕ ಚಂದ್ರಕಾoತ ಕೊಚರೇಕರ ಅವರು ಆಗ್ರಹಿಸಿದ್ದಾರೆ.
`ರಾಜ್ಯದ ಕರಾವಳಿ, ಮಲೆನಾಡು ಭಾಗದ ಶಾಸಕರು ಮತ್ತು ಅರಣ್ಯ ಹಕ್ಕು ಹೋರಾಟ ಸಂಘಟನೆಗಗಳ ಜೊತೆ ಉನ್ನತಾಧಿಕಾರ ಮಟ್ಟದ ಜಂಟಿ ಸಂವಾದ ಸಭೆ ನಡೆಯಬೇಕು. 2005ರ ಪೂರ್ವದಿಂದ ಅರಣ್ಯ ಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು ನೀಡಲು ಪರಿಗಣಿಸಬೇಕು’ ಎಂದವರು ಒತ್ತಾಯಿಸಿದ್ದಾರೆ. `ಶಾಸಕ ಶಿವರಾಮ ಹೆಬ್ಬಾರ್ ಅವರ ಪ್ರಶ್ನೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಉತ್ತರ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅನುಷ್ಠಾನ ಪ್ರಕ್ರಿಯೆ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಇಲ್ಲಿ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡಲು ಸ್ವಾತಂತ್ರ‍್ಯ ಪೂರ್ವದ ದಾಖಲೆಗಳಿಗಾಗಿ ಒತ್ತಾಯ ಪಡಿಸಲಾಗುತ್ತಿದೆ’ ಎಂಬ ಅಂಶವನ್ನು ಚಂದ್ರಕಾoತ ಕೋಚ್ರೇಕರ್ ಅವರು ಪುನರುಚ್ಚರಿಸಿದ್ದಾರೆ.
`ಅರಣ್ಯಾಧಿಕಾರಿಗಲ ನಡೆ 2012ರ ತಿದ್ದುಪಡಿ ನಿಯಮ ಮತ್ತು ಕೇಂದ್ರ ಬುಡಕಟ್ಟು ಸಚಿವಾಲಯದ ನಿರ್ದೇಶನಗಳಿಗೆ ವಿರುದ್ಧವಾಗಿದೆ. ಈ ನಡೆಯಿಂದ ವಸತಿ ಮತ್ತು ಜೀವನೋಪಾಯಕ್ಕೆ ಅರಣ್ಯ ಭೂಮಿಯನ್ನು ಅವಲಂಬಿಸಿರುವ ರಾಜ್ಯದ ಲಕ್ಷಾಂತರ ಅರ್ಹ ಜನರು ಭೂಮಿಯ ಹಕ್ಕಿನಿಂದ ವಂಚಿತರಾಗುವ ಅಪಾಯ ಎದುರಾಗಿದೆ. ಒಂದು ಕಡೆ ಅರಣ್ಯ ಹಕ್ಕುಗಳ ಪರಿಶೀಲನೆ ಮತ್ತು ಹಕ್ಕುಗಳನ್ನು ಮಾನ್ಯ ಮಾಡುವಲ್ಲಿ ಕ್ಷೇತ್ರ ಮಟ್ಟದಲ್ಲಿ ತೊಂದರೆಗಳಿದ್ದು, ಅವುಗಳನ್ನು ಬಗೆಹರಿಸಲು ಮುಖ್ಯ ಕಾರ್ಯದರ್ಶೀಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ಮೇಲ್ವಿಚಾರಣಾ ಸಮಿತಿಗೆ ಅಧಿಕಾರವಿರುವ ಬಗ್ಗೆ ಕಾಯ್ದೆಯಲ್ಲಿದೆ. ಈ ಬಗ್ಗೆ ಅರಣ್ಯ ಸಚಿವರೇ ವಿಧಾನಸಭೆಯಲ್ಲಿ ಶಾಸಕರಿಗೆ ಲಿಖಿತ ಉತ್ತರ ನೀಡಿದ್ದಾರೆ’ ಎಂದವರು ವಿವರಿಸಿದರು.
`ಈ ಎಲ್ಲದರ ನಡುವೆ ರಾಜ್ಯದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಈಗಾಗಲೇ ತಿರಸ್ಕರಿಸಿದೆ. ಇಂತಹ ದ್ವಂದ್ವ ಮತ್ತು ಗೊಂದಲಗಳಿAದ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ಇತರ ಪಾರಂಪರಿಕ ಅರಣ್ಯವಾಸಿಗಳ ಬದುಕು ಬೀದಿಗೆ ಬರುವ ಅಪಾಯ ಎದುರಾಗಿz’ ಎಂದವರು ಕಳವಳವ್ಯಕ್ತಪಡಿಸಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಗತ್ಯ ಯೋಜನೆಗಳಿಗೆ ಅರಣ್ಯ ಭೂಮಿ ನೀಡಲಾಗುತ್ತಿದೆ. ಆದರೆ, ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಅತಿಕ್ರಮಿಸಿದವರಿಗೆ ಅನಗತ್ಯ ತೊಂದರೆ ನೀಡಲಾಗುತ್ತಿದೆ. ಇದನ್ನು ಬಗೆಹರಿಸುವುದಕ್ಕಾಗಿ ಮುಖ್ಯಮಂತ್ರಿಗಳು, ಸಚಿವರ ಮಟ್ಟದಲ್ಲಿ ಸಭೆ ನಡೆಯಬೇಕು’ ಎಂದವರು ಆಗ್ರಹಿಸಿದ್ದಾರೆ.