ಉತ್ತರ ಕನ್ನಡ ಜಿಲ್ಲೆಯ ಪುಣ್ಯ ಹಾಗೂ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಮುರುಡೇಶ್ವರದ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ಭಕ್ತರು ನಂಬಿಕೆಯಿoದ ನೀಡಿದ ಹಣ ಇರ್ಷಾದ್ ಎಂಬಾತರ ಖಾತೆ ಸೇರುತ್ತಿದೆ.
ಮುರುಡೇಶ್ವರ ದೇವಸ್ಥಾನದಿಂದ ಯಾವುದೇ ಬಗೆಯ `ಲಕ್ಕಿ ಡ್ರಾ’ ಯೋಜನೆಗಳಿಲ್ಲ. ಅದಾಗಿಯೂ, ಜಾಲತಾಣಗಳಲ್ಲಿ `ಮುರುಡೇಶ್ವರ ದೇವಸ್ಥಾನ ಅದೃಷ್ಟ ಡ್ರಾ’ ಎಂಬ ಪೋಸ್ಟರ್ ಹರಿದಾಡುತ್ತಿದೆ. ಇರ್ಷಾದ್ ಎಂಬಾತರ ಖಾತೆಗೆ 299ರೂ ಪಾವತಿಸಿದರೆ ಬಗೆ ಬಗೆಯ ಉಡುಗರೆ ನೀಡುವುದಾಗಿ ಘೋಷಿಸಿ ಮೋಸ ಮಾಡಲಾಗುತ್ತಿದೆ.
ಮುರುಡೇಶ್ವರದ ಹೆಸರಿನಲ್ಲಿ ನಡೆಯುತ್ತಿರುವ ಮೋಸ ಇದೇ ಮೊದಲಲ್ಲ. ಮುರುಡೇಶ್ವರ ದೇಗುಲ ಸಮಿತಿಯವರೇ ದೇವಾಲಯದ ಹೆಸರು ದುರುಪಯೋಗದ ಬಗ್ಗೆ ಪೊಲೀಸ್ ದೂರು ಸಹ ನೀಡಿದ್ದಾರೆ. ಆದರೆ, ಈವರೆಗೂ ವಂಚಕರ ಪತ್ತೆ ಸಾಧ್ಯವಾಗಿಲ್ಲ. ದೇವಾಲಯದ ಹೆಸರಿನಲ್ಲಿ ಜನರನ್ನು ಮೋಸ ಮಾಡುವ ಕೆಲಸವೂ ನಿಂತಿಲ್ಲ.
ಸದ್ಯ `ಡಿಸೆಂಬರ್ 17ರ ಸಂಜೆ 7 ಗಂಟೆಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಲಕ್ಕಿ ಡ್ರಾ ಹೆಸರನ್ನು ಘೋಷಣೆ ಮಾಡಲಾಗುತ್ತದೆ’ ಎಂಬ ನಿಟ್ಟಿನಲ್ಲಿ ಪೋಸ್ಟರ್ ಹರಿದಾಡುತ್ತಿದೆ. ಕಾರು, ಟ್ರಕ್, ಟಾಕ್ಟರ್, ಬೈಕುಗಳ ಜೊತೆ ಟಿವಿ ಪ್ರಿಜ್ಜುಗಳನ್ನು ಉಡುಗರೆಯಾಗಿ ನೀಡುವುದಾಗಿ ಘೋಷಿಸಲಾಗಿದೆ. ಮಾಹಿತಿಗಾಗಿ ಮೊಬೈಲ್ ಸಂಖ್ಯೆಯನ್ನು ಸಹ ನೀಡಲಾಗಿದ್ದು, ಅಲ್ಲಿ ಸಂಪರ್ಕಿಸಿದವರಿಗೆ 299ರೂ ಪಾವತಿಸುವಂತೆ ಸೂಚಿಸಲಾಗುತ್ತಿದೆ. ಒಟ್ಟು 17 ಬಗೆಯ ಉಡುಗರೆಗಳನ್ನು ಪೋಸ್ಟರ್ ಮೂಲಕ ಕಾಣಿಸಲಾಗಿದ್ದು, ದೇವಾಲಯದಿಂದಲೇ `ಲಕ್ಕಿ ಡ್ರಾ’ ನಡೆಯುತ್ತಿರುವ ಬಗ್ಗೆ ಭಾವಿಸಿ ಜನ ಹಣ ಪಾವತಿಸುತ್ತಿದ್ದಾರೆ.
`ವಂಚಕರು ಬೇರೆ ಬೇರೆ ಮೊಬೈಲ್ ಸಂಖ್ಯೆ ಹಾಗೂ ಬೇರೆ ಬೇರೆ ಬ್ಯಾಂಕ್ ಖಾತೆ ಮೂಲಕ ದೇವಾಲಯದ ಹೆಸರು ಬಳಕೆ ಮಾಡುತ್ತಿದ್ದಾರೆ. ಮುರುಡೇಶ್ವರದ ಜೊತೆ ಇನ್ನಿತರ ದೇವಾಲಯಗಳ ಹೆಸರು ದುರ್ಬಳಕೆ ಆಗುತ್ತಿದ್ದು, ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ’ ಎಂದು ಮುರುಡೇಶ್ವರ ಪಿಎಸೈ ಹಣಮಂತ ಬೀರಾದರ್ ಅವರು ತಿಳಿಸಿದರು. `ಮುರುಡೇಶ್ವರ ದೇವಾಲಯದಿಂದ ಯಾವುದೇ ಲಕ್ಕಿ ಡ್ರಾ ಯೋಜನೆಗಳಿಲ್ಲ. ವಂಚಕರ ಬಗ್ಗೆ ಈಗಾಗಲೇ ಪೊಲೀಸ್ ದೂರು ಸಹ ನೀಡಲಾಗಿದ್ದು, ಭಕ್ತರು ಮೋಸ ಹೋಗಬಾರದು’ ಎಂದು ದೇಗುಲದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಮನವಿ ಮಾಡಿದರು.