ಅತಿಕ್ರಮಣದಾರರಿಗೆ ಪದೇ ಪದೇ ನೋಟಿಸ್ ನೀಡುತ್ತಿದ್ದ ಕುಮಟಾ ಎಸಿಎಫ್ ಕೃಷ್ಣ ಗೌಡ ಅವರ ಕಚೇರಿಗೆ ಅರಣ್ಯವಾಸಿಗಳು ದಾಳಿ ಮಾಡಿದ್ದಾರೆ. ಅನಗತ್ಯ ಕಿರುಕುಳ ನೀಡುತ್ತಿರುವುದಕ್ಕೆ ಅಸಮಧಾನವ್ಯಕ್ತಪಡಿಸಿದ್ದಾರೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಮಂಜುನಾಥ ಮರಾಠಿ ಅವರು ಅಧಿಕಾರಿಗಳು ಹಿಂಸೆ ನೀಡುತ್ತಿರುವುದನ್ನು ಖಂಡಿಸಿದ್ದಾರೆ. ಈ ವೇಳೆ `ಅರಣ್ಯ ಹಕ್ಕು ಕಾಯಿದೆಯಡಿಯಲ್ಲಿ ಇತ್ಯರ್ಥವಾಗದ ಅರ್ಜಿಗಳನ್ನ ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುತ್ತದೆ’ ಎಂದು ಎಸಿಎಫ್ ಕೃಷ್ಣ ಗೌಡ ಅವರು ಭರವಸೆ ನೀಡಿ ಅತಿಕ್ರಮಣದಾರರನ್ನು ಸಮಾಧಾನ ಮಾಡಿದ್ದಾರೆ.
ಕತಗಾಲ ಬಳಿಯ ಕೃಷ್ಣ ದೇವಪ್ಪ ನಾಯ್ಕ, ಈಶ್ವರ ನಾರಾಯಣ ನಾಯ್ಕ. ಈಶ್ವರ್ ದೇವಪ್ಪ ನಾಯ್ಕ, ದುರ್ಗಿ ಕೃಷ್ಣ ನಾಯ್ಕ ಕಡ್ಣೀರ್, ಮಾದೇವ ಸುಬ್ಬ ನಾಯ್ಕ ಅಳವಳ್ಳಿ, ಗಣಪತಿ ಜಟ್ಟಿ ದೇಶಭಂಡಾರಿ ಹರವಳ್ಳಿ ಅವರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗದೇ ಇದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದರು. ಈ ಹಿನ್ನಲೆ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಸರ್ಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶವ್ಯಕ್ತಪಡಿಸಿದರು.