ಮಾಟ ಮಂತ್ರಕ್ಕೆ ಹೆದರಿದ ಮುಂಡಗೋಡದ ಮಿತಿಲೇಶ ಶಿಂಗೆ ಅವರು ಕ್ರಿಮಿನಾಶಕ ಸೇವಿಸಿ ಸಾವನಪ್ಪಿದ್ದಾರೆ. ತೀವೃ ಅಸ್ವಸ್ಥರಾದ ಅವರನ್ನು ಚಿಕಿತ್ಸೆಗೆ ದಾಖಲಿಸಿದರೂ ಜೀವ ಉಳಿಸಿಕೊಳ್ಳಲು ಆಗಲಿಲ್ಲ.
ಮುಂಡಗೋಡಿನ ಅಂಬೇಡ್ಕರ ಓಣಿಯಲ್ಲಿ ಮಿತಿಲೇಶ ಶಿಂಗೆ (24) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಅವರ ಜೀವನ ಚನ್ನಾಗಿಯೇ ಇತ್ತು. ಆದರೆ, ಅವರ ತಲೆಯೊಳಗೆ ಮಾಟ-ಮಂತ್ರದ ಕ್ರಿಮಿ ಕೂತಿತು. `ಯಾರೋ ತನಗೆ ಗಾಳಿ ಮಾಡಿಸಿದ್ದಾರೆ’ ಎಂದವರು ಎಲ್ಲಾ ಕಡೆ ಹೇಳಿಕೊಂಡಿದ್ದರು. ಅದೇ ವಿಷಯವಾಗಿ ಮಾನಸಿಕವಾಗಿ ಕುಗ್ಗಿದ್ದರು.
ಕಳೆದ 2 ತಿಂಗಳಿನಿAದಲೂ ಮಿತಿಲೇಶ ಶಿಂಗೆ ಅಸ್ವಸ್ಥರಾಗಿದ್ದರು. ಮಾಟ-ಮಂತ್ರ-ಗಾಳಿ ಸುದ್ದಿ ವಿಷಯವಾಗಿ ಅವರು ಸಾಕಷ್ಟು ತಲೆ ಕೆಡಿಸಿಕೊಂಡಿದ್ದರು. ಅದೇ ನೋವಿನಲ್ಲಿ ಸೆಪ್ಟೆಂಬರ್ 25ರ ರಾತ್ರಿ ಅವರು ಮನೆಯಲ್ಲಿದ್ದ ಕ್ರಿಮಿನಾಶಕ ಕುಡಿದರು. ಆರೋಗ್ಯದಲ್ಲಿ ಏರುಪೇರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್’ಗೆ ಕರೆದೊಯ್ಯಲಾಯಿತು. ಅದಾಗಿಯೂ ಮಿತಿಲೇಶ ಶಿಂಗೆ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಧಾರವಾಡದಲ್ಲಿರುವ ಮಿತಿಲೇಶ ಶಿಂಗೆ ಅವರ ತಂಗಿ ಪಲ್ಲವಿ ವಡ್ಡರ್ ಅವರು ಮುಂಡಗೋಡು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.