ಸೋನಿಯಾ ಗಾಂಧೀ ಹಾಗೂ ರಾಹುಲ್ ಗಾಂಧೀ ವಿರುದ್ಧ ಬಿಜೆಪಿಗರು ಪದೇ ಪದೇ ಆರೋಪ ಮಾಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ಸಿಗರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಬಿಜೆಪಿ ವಿರುದ್ಧ ಜಿಲ್ಲಾ ಕಾಂಗ್ರೆಸ್ಸಿಗರು ಪ್ರತಿಭಟಿಸಿದ್ದಾರೆ.
ಶಿರಸಿಯ ಕಾಂಗ್ರೆಸ್ ಕಾರ್ಯಾಲಯದಿಂದ ಬಿಜೆಪಿ ಕಚೇರಿಯವರೆಗೆ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮಾಡಿದರು. ನಂತರ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. `ಕೇಂದ್ರದ ಬಿಜೆಪಿ ಸರ್ಕಾರ ಅಮಾಯಕರ ಮೇಲೆ ಅನಗತ್ಯ ಮೊಕದ್ದಮೆ ದಾಖಲಿಸುತ್ತಿದೆ. ವಿರೋಧ ಪಕ್ಷದ ನಾಯಕರನ್ನು ಗುರಿ ಮಾಡಿ ಪ್ರಕರಣ ದಾಖಲಿಸುತ್ತಿದೆ’ ಎಂದು ದೂರಿದರು.
`ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಆಸ್ತಿ ಮತ್ತು ಹಣ ವರ್ಗಾವಣೆಯಾಗಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.
`ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಯಾವುದೇ ಹಣ ಹಾಗೂ ಆಸ್ತಿಯನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ದುರುಪಯೋಗಪಡಿಸಿಕೊಂಡಿಲ್ಲ ಎಂದು ನ್ಯಾಯಾಲಯವು ಕಾಂಗ್ರೆಸ್ ಪರ ತೀರ್ಪು ನೀಡಿದೆ. ಇದರಿಂದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಅಧಿಕಾರವನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರ ವ್ಯಕ್ತಿತ್ವದ ತೇಜೋವಧೆ ಮಾಡುತ್ತಿರುವುದು ಸ್ಪಷ್ಟವಾಗಿದೆ’ ಎಂದರು.