ಹಸಿ ಅಡಿಕೆ ಮಾರಾಟ ವಿಷಯವಾಗಿ TSS ಹಾಗೂ ವ್ಯಾಪಾರಸ್ಥರ ನಡುವೆ ಹಗ್ಗ ಜಗ್ಗಾಟ ನಡೆದಿದೆ. ಆ ನಡುವೆಯೂ ದಾಖಲೆ ಪ್ರಮಾಣದಲ್ಲಿ ಹಸಿ ಅಡಿಕೆ ಟೆಂಡರಿಗೆ ಬರುತ್ತಿದ್ದು, ದರವೂ ತೀರಾ ಏರುಪೇರಾಗಿಲ್ಲ.
`ಹಸಿ ಅಡಿಕೆ ಟೆಂಡರ್ ವೇಳೆ ಅಡಿಕೆ ಜೊತೆಗಿರುವ ಜಂಗಿನ ತೂಕ ಬಿಡಬೇಕು’ ಎಂಬುದು ವ್ಯಾಪಾರಸ್ಥರ ವಾದ. `ಟಿಎಸ್‌ಎಸ್ ಸಂಸ್ಥೆಯವರು ಜಂಗಿನ ತೂಕವನ್ನು ಸೇರಿ ಕಮಿಷನ್ ವಿಧಿಸುತ್ತಿದ್ದು, ಅದರಿಂದ ವ್ಯಾಪಾರಸ್ಥರಿಗೆ ಅನ್ಯಾಯವಾಗುತ್ತಿದೆ’ ಎಂಬುದು ಅವರ ಅಳಲು. ಆದರೆ, `ಮೊದಲಿನಿಂದಲೂ ಇದೇ ಪದ್ಧತಿಯಿದೆ. ಅದರ ಬದಲಾವಣೆ ಅಸಾಧ್ಯ. `ಸಹಕಾರಿ ಸಂಘವೂ ಟೆಂಡರಿನಲ್ಲಿ ಭಾಗವಹಿಸುತ್ತಿದೆ’ ಎಂಬುದು ಟಿಎಸ್‌ಎಸ್ ಮಾತು. `ಈ ಗೊಂದಲ ಸರಿಯಾಗುವವರೆಗೂ ಟೆಂಡರ್ ಬರೆಯುವುದಿಲ್ಲ’ ಎಂದು ವ್ಯಾಪಾರಸ್ಥರು ಪಟ್ಟು ಹಿಡಿದಿದ್ದು, ಬುಧವಾರದಿಂದಲೇ ಬಹುತೇಕ ವ್ಯಾಪಾರಿಗಳು ಟಿ ಎಸ್ ಎಸ್ ಅಂಗಳದಿOದ ದೂರ ಸರಿದಿದ್ದಾರೆ. ಅದಾಗಿಯೂ ಟಿ ಎಸ್ ಎಸ್ ಅಂಗಳಕ್ಕೆ ಹಸಿ ಅಡಿಕೆ ಬರುವ ಪ್ರಮಾಣ ಕಡಿಮೆ ಆಗಿಲ್ಲ. ದರದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಏರಿಳಿತ ಕಂಡಿಲ್ಲ.
ಈ ನಡುವೆ `ಹಸಿ ಅಡಕೆ ಖರೀದಿಸುವ ವೇಳೆ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸಿ’ ಎಂದು ಹಸಿ ಅಡಕೆ ಖರೀದಿದಾರರು ಗುರುವಾರ ಎಪಿಎಂಸಿ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದಾರೆ. `ಪ್ರಸಕ್ತ ಸಾಲಿನಲ್ಲಿ ಅಡಿಕೆ ಕೊನೆಯಲ್ಲಿ ಜಿಂಗಿನ ಪ್ರಮಾಣ ಜಾಸ್ತಿ ಬರುತ್ತಿದೆ. ಈ ಮೊದಲು ಹಸಿ ಅಡಿಕೆ ಜೊತೆ ಜಂಗನ್ನು ಖರೀದಿಸಿದ್ದರಾದರೂ ಈ ವರ್ಷ ಜಂಗಿನ ಪ್ರಮಾಣ ಹೆಚ್ಚಿರುವ ಕಾರಣ ನಷ್ಟವಾಗುತ್ತಿದೆ’ ಎಂದವರು ತಮ್ಮ ಸಮಸ್ಯೆ ವಿವರಿಸಿದರು. `ಪ್ರತಿ ಕ್ವಿಂಟಾಲ್ ಹಸಿ ಅಡಿಕೆಗೆ 10 ಕೆಜಿ ಜಿಂಗಿನ ತೂಕ, 1 ಕೆಜಿ ವೇಸ್ಟೇಜ್ ಕಡಿಮೆ ಮಾಡಬೇಕು. ನಾವು ಖರೀದಿ ಮಾಡಿದ ಅಡಕೆಗೆ ಶೇ 2.85 5ರಿಂದ ಶೇ 3.5ರಷ್ಟು ಕಮಿಷನ್ ನೀಡುತ್ತಿದ್ದು, ಅದನ್ನು ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.
`ಸಂಘ-ಸ0ಸ್ಥೆ, ರೈತರು ಹಾಗೂ ವ್ಯಾಪಾರಸ್ಥರ ಹಿತಾಸಕ್ತಿಯನ್ನು ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದು ಹಸಿ ಅಡಿಕೆ ವ್ಯಾಪಾರದಲ್ಲಿ ರೈತರಿಗೆ ಬೆಲೆ-ತೂಕದಲ್ಲಿ ಅನ್ಯಾಯವಾಗದಂತೆ ಹಾಗೂ ವ್ಯಾಪಾರಸ್ಥರಿಗೂ ಹಾನಿಯಾಗದಂತೆ ಅನುಸರಿಸುವ ಮಾರ್ಗದ ಬಗ್ಗೆ ಚಿಂತಿಸಲಾಗುತ್ತದೆ. ಈ ಬಗ್ಗೆ ವರ್ತಕರು, ಸಂಘ ಸಂಸ್ಥೆಗಳು ಮತ್ತು ರೈತರನ್ನೊಳಗೊಂಡು ಚರ್ಚೆ ನಡೆಸುತ್ತೇವೆ’ ಎಂದು ಶಿರಸಿ ಎಪಿಎಂಸಿ ಜಂಟಿ ನಿರ್ದೇಶಕ ಸಿ ಎಚ್ ಮೋಹನ ಅವರು ಪ್ರತಿಕ್ರಿಯಿಸಿದರು.