ಬೆಳಗ್ಗೆ ಬೇಗ ಎದ್ದು ಮೀನು ಹಿಡಿಯಲು ಹೋಗಿದ್ದ ಮನೋಹರ ಹರಿಕಂತ್ರ ಅವರು ನೀರಿಗೆ ಬಿದ್ದಿದ್ದು, ಅವರ ರಕ್ತ ಹೆಪ್ಪುಗಟ್ಟಿದೆ. ಐದು ಆಸ್ಪತ್ರೆ ತಿರುಗಾಟ ನಡೆಸಿದರೂ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ.
ಕುಮಟಾ ಹಿರೇಗುತ್ತಿಯ ನುಶೀಕೋಟೆಯಲ್ಲಿ ಮನೋಹರ ಹನುಮಾ ಹರಿಕಂತ್ರ (52) ಅವರು ವಾಸವಾಗಿದ್ದರು. ನವೆಂಬರ್ 15ರ ಬೆಳಗ್ಗೆ ನುಶೀಕೋಟೆ ಸಮೀಪದ ಹೊಳೆಯಲ್ಲಿ ಅವರು ಮೀನುಗಾರಿಕೆಗೆ ಹೋಗಿದ್ದರು. ಬಲೆ ಹಾಕಿ ಕಾಯುತ್ತಿದ್ದಾಗ ಆಯ ತಪ್ಪಿ ಅವರು ಹೊಳೆಗೆ ಬಿದ್ದರು.
ಅಸ್ವಸ್ಥರಾದ ಮನೋಹರ ಹರಿಕಂತ್ರ ಅವರನ್ನು ಕುಮಟಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. `ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ’ ಎಂದ ವೈದ್ಯರು ಅವರನ್ನು ಮತ್ತೆ ಬೇರೆ ಕಡೆ ಕರೆದೊಯ್ಯುವಂತೆ ಸೂಚಿಸಿದರು.
ಹೀಗಾಗಿ ಕುಟುಂಬದವರು ಮನೋಹರ ಹರಿಕಂತ್ರ ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು. ಅಲ್ಲಿಯೂ ಆರೋಗ್ಯದಲ್ಲಿ ಚೇತರಿಕೆ ಕಾಣದ ಕಾರಣ ಮತ್ತೆ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಒಂದುವರೆ ತಿಂಗಳ ಕಾಲ ನರಳಾಟ ನಡೆಸಿದ ಮನೋಹರ ಹರಿಕಂತ್ರ ಅವರು ಡಿಸೆಂಬರ್ 18ರಂದು ಸಾವನಪ್ಪಿದರು. ಕುಮಟಾ ಹಿರೇಗುತ್ತಿಯ ವಿನೋದ ಕೃಷ್ಣ ಹರಿಕಂತ್ರ ಅವರು ಈ ಮಾಹಿತಿ ತಿಳಿಸಿದರು.