ಕಾರವಾರ ಕಡಲತೀರದಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಅದ್ಧೂರಿಯಾಗಿ `ಕರಾವಳಿ ಉತ್ಸವ’ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಇದಕ್ಕೆ ಎಲ್ಲಾ ಬಗೆಯ ತಯಾರಿಗಳು ಜೋರಾಗಿದೆ. ಡಿಸೆಂಬರ್ 22ರಿಂದ 28ರವರೆಗೆ ಸಪ್ತಾಹದ ಮಾದರಿಯಲ್ಲಿ ಉತ್ಸವ ನಡೆಯಲಿದೆ.
Advertisement. Scroll to continue reading.
ಎಂಟು ವರ್ಷಗಳ ನಂತರ ಕರಾವಳಿ ಉತ್ಸವ ಆಯೋಜಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡಲಾಗುತ್ತಿದೆ. ಸರ್ಕಾರಿ ಕಚೇರಿ ಗೋಡೆಗಳ ಮೇಲೆ ಚಿತ್ರಕಲೆ, ಸ್ವಾಗತ ಕಮಾನು, ಆಕರ್ಷಕ ಮಂಟಪದ ಜೊತೆ ವಿವಿಧ ಮಳಿಗೆಗಳು ಕರಾವಳಿ ಉತ್ಸವಕ್ಕೆ ಆಗಮಿಸುವವರನ್ನು ಸ್ವಾಗತಿಸುತ್ತಿವೆ. ಖ್ಯಾತ ಕಲಾವಿದರ ಜೊತೆ ಸ್ಥಳೀಯ ಪ್ರತಿಭೆ ಪ್ರದರ್ಶನಕ್ಕೂ ಈ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ. ಉತ್ಸವ ಅಂಗವಾಗಿ ನಡೆದ ವಿವಿಧ ಹಂತದ ಸ್ಪರ್ಧೆಗಳು ಯಶಸ್ವಿಯಾಗಿದ್ದು, ಇನ್ನೂ ಅನೇಕ ಬಗೆಯ ಆಟೋಟಗಳು ನಡೆಯಲಿದೆ.
ಈ ಬಾರಿಯ ಕರಾವಳಿ ಉತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ರಾಜ್ಯ ಹಾಗೂ ಹೊರರಾಜ್ಯದ ಪ್ರವಾಸಿಗರು ಸಹ ಕರಾವಳಿ ಉತ್ಸವಕ್ಕೆ ಆಗಮಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರಾವಳಿ ಉತ್ಸವಕ್ಕೆ ಆಮಂತ್ರಿಸಲಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸೇರಿ ಅನೇಕ ಗಣ್ಯರು ಉತ್ಸವದ ಬಗ್ಗೆ ವಿಡಿಯೋ ಸಂದೇಶ ರವಾನಿಸಿದ್ದಾರೆ. `ಜಿಲ್ಲೆಯಲ್ಲಿ ಅತೀ ದೊಡ್ಡ ಉತ್ಸವವೆಂದರೆ ಅದು ಕರಾವಳಿ ಉತ್ಸವ’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಹೇಳಿದ್ದಾರೆ.