ನರಸಿಂಹ ಭಾಗ್ವತ ಅವರ ಅನ್ನಪೂರ್ಣ ಮಾರ್ಟಿಗೆ ನುಗ್ಗಿದ ಕಳ್ಳರು ಐಸ್ ಕ್ರೀಂ ಕದ್ದಿದ್ದಾರೆ. ಅದರ ಜೊತೆ 10 ಸಾವಿರ ರೂ ಹಣ, 5 ಸಾವಿರ ರೂಪಾಯಿಯ ಕಿರಾಣಿ ಸಾಮಗ್ರಿ ಜೊತೆ ನಿತ್ಯ ಬಳಕೆ ವಸ್ತುಗಳನ್ನು ಸಹ ದೋಚಿದ್ದಾರೆ.
ಅಂಕೋಲಾದ ಕನಕನಳ್ಳಿಯ ನರಸಿಂಹ ನಾರಾಯಣ ಭಾಗ್ವತ ಅವರು ಅನ್ನಪೂರ್ಣ ಮಾರ್ಟ ಎಂಬ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಅವರ ವ್ಯಾಪಾರದ ಮೇಲೆ ಕಳ್ಳರು ಕಣ್ಣು ಹಾಕಿದ್ದು, ರಾತ್ರಿ ವೇಳೆ ಹಿಂದಿನ ಬಾಗಿಲು ಒಡೆದು ಆ ಮಳಿಗೆಗೆ ನುಗ್ಗಿದ್ದಾರೆ. ಅಂಗಡಿಯಲ್ಲಿದ್ದ ಡ್ರಾವರಿಗೆ ಕೈ ಹಾಕಿದ ಕಳ್ಳರಿಗೆ 10 ಸಾವಿರ ರೂ ಹಣ ಸಿಕ್ಕಿದೆ. ಅದಾದ ನಂತರ ವಿವಿಧ ಕಿರಾಣಿ ಹಾಗೂ ನಿತ್ಯದ ಬಳಕೆ ವಸ್ತುಗಳನ್ನು ಕಳ್ಳರು ಕದ್ದಿದ್ದಾರೆ. ಕೊನೆಗೆ ಐಸ್ ಕ್ರೀಂ ಮೇಲೆ ಆಸೆಪಟ್ಟ ಕಳ್ಳರು ಅದನ್ನು ಅಪಹರಿಸಿದ್ದಾರೆ.
ಡಿಸೆಂಬರ್ 18ರ ರಾತ್ರಿ ನರಸಿಂಹ ಭಾಗ್ವತ ಅವರು ಅಂಗಡಿಗೆ ಬೀಗ ಹಾಕಿ ಮನೆಗೆ ಹೋದ ನಂತರ ಕಳ್ಳರ ಆಗಮನವಾಗಿದೆ. ಡಿಸೆಂಬರ್ 19ರ ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಅಲ್ಲಿದ್ದ ಹಣ ಹಾಗೂ ಸಾಮಗ್ರಿ ಕಾಣೆಯಾಗಿರುವುದು ಭಾಗ್ವತರ ಗಮನಕ್ಕೆ ಬಂದಿದೆ. ಮಳಿಗೆಯ ಹಿಂದಿನ ಬಾಗಿಲಿಗೆ ರಂದ್ರ ಮಾಡಿ, ಲಾಲ್ದಂಡಿ ತೆಗೆದು ಕಳ್ಳರು ಒಳಗೆ ನುಗ್ಗಿರುವುದು ಆ ವೇಳೆ ನರಸಿಂಹ ಭಾಗ್ವತ ಅವರಿಗೆ ಗೊತ್ತಾಗಿದೆ.
ಒಂದೇ ರಾತ್ರಿಯಲ್ಲಿ 25 ಸಾವಿರ ರೂ ನಷ್ಟ ಅನುಭವಿಸಿದ ನರಸಿಂಹ ಭಾಗ್ವತ ಅವರು ಕಳ್ಳರ ಕಾಟದ ಬಗ್ಗೆ ಮನೆಯಲ್ಲಿ ಹೇಳಿದ್ದಾರೆ. ಕುಟುಂಬದವರ ಸಲಹೆ ಮೇರೆಗೆ ಅವರು ಅಂಕೋಲಾ ಪೊಲೀಸ್ ಠಾಣೆಗೆ ಹೋಗಿದ್ದು, ಕಳ್ಳತನದ ವರದಿ ಒಪ್ಪಿಸಿದ್ದಾರೆ. ಪೊಲೀಸರು ಕನಕನಳ್ಳಿಗೆ ಬಂದಿದ್ದ ಕಳ್ಳರ ಹುಡುಕಾಟ ನಡೆಸಿದ್ದಾರೆ.