ಉತ್ತರ ಕನ್ನಡ ಜಿಲ್ಲೆಯ ಮೂರು ಕಡೆ ಮಂಗಳವಾರ ಲೋಕಾಯುಕ್ತ ದಾಳಿ ನಡೆದಿದೆ. ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಹಕಾರಿ ಸಂಘದ ಅಧಿಕಾರಿ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.
Advertisement. Scroll to continue reading.
ಸಹಕಾರಿ ಸಂಘಗಳು ಸಾರ್ವಜನಿಕ ಆಸ್ತಿಯಾಗಿದೆ. ಹೀಗಾಗಿ ಅಲ್ಲಿ ಕೆಲಸ ಮಾಡುವ ನೌಕರರು ಸಹ ಲೋಕಾಯುಕ್ತ ಅಧೀನದಲ್ಲಿ ಬರುವ ಬಗ್ಗೆ ಈಚೆಗೆ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಹಿನ್ನಲೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ನೌಕರನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ದಾಳಿ ಮಾಡಿದ್ದಾರೆ.
ಸಿದ್ಧಾಪುರ ತಾಲೂಕಿನ ಕೋಲಸಿರ್ಸಿ ಗ್ರೂಪ್ ಗ್ರಾಮ ಸೇವಾ ಸಹಕಾರಿ ಸಂಘದ ಮುಖ್ಯ ಅಧಿಕಾರಿ ಮಾರುತಿ ಯಶವಂತ ಮಾಲ್ವಿ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಸಿದ್ದಾಪುರ ಹಾಗೂ ಹಳಿಯಾಳದಲ್ಲಿ ಅವರು ಹೊಂದಿದ್ದ ಆಸ್ತಿಗಳ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದು, ವಿವಿಧ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಮಾರುತಿ ಮಾಲ್ವಿ ಅವರ ಮನೆ, ಕಚೇರಿ ಹಾಗೂ ಅವರ ಒಡೆತನದ ಅಂಗಡಿಗಳ ಮೇಲೆ ದಾಳಿ ನಡೆದಿದ್ದು, ಲೆಕ್ಕಪತ್ರಗಳ ತಪಾಸಣೆ ನಡೆಯುತ್ತಿದೆ.
ಮಾರುತಿ ಮಾಲ್ವಿ ಅವರ ಆಸ್ತಿ ಪತ್ರ, ಬ್ಯಾಂಕ್ ದಾಖಲೆಗಳನ್ನು ಲೋಕಾಯುಕ್ತ ಪಿಐ ವಿನಾಯಕ ಬಿಲ್ಲವ ಅವರು ಪರಿಶೀಲಿಸಿದ್ದಾರೆ. ಹಳಿಯಾಳದಲ್ಲಿರುವ ಆಸ್ತಿಗಳನ್ನು ಡಿವೈಎಸ್ಪಿ ಧನ್ಯಾ ನಾಯಕ ಅವರು ತಪಾಸಣೆ ಮಾಡುತ್ತಿದ್ದಾರೆ.