ಶಿರಸಿಯ ಅಯ್ಯಪ್ಪ ನಗರದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮೂರು ದಿನಗಳ ಅನ್ನದಾನ ಸೇವೆಗೆ ಶುಕ್ರವಾರ ಚಾಲನೆ ಸಿಕ್ಕಿದೆ.
Advertisement. Scroll to continue reading.
ಹುಬ್ಬಳ್ಳಿ ರಸ್ತೆಯ ಅಯ್ಯಪ್ಪನಗರದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸುತ್ತಿದ್ದಾರೆ. ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರು `ಅಯ್ಯಪ್ಪ ಸ್ವಾಮಿ ಮಂಡಳ ಉತ್ಸವ’ ಹಾಗೂ ಮಹಾ ಅನ್ನದಾನ ಕಾರ್ಯಕ್ರಮ ಆಯೋಜಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 6ಗಂಟೆಗೆ ಗಣಹೋಮ, ಹಣ್ಣುಕಾಯಿ ಸಮರ್ಪಣೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆತಿದೆ. ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅವರ ದಂಪತಿಸಹಿತ ಗಣಹೋಮದ ಪೂಜೆ ಮಾಡಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೆ ಅನ್ನದಾನ ನಡೆದಿದ್ದು, ಭೂಶ್ವರ ಪತ್ತಿನ ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ತಮ್ಮ ತಂದೆ ವಸಂತ ಶೆಟ್ಟಿ ಅವರ ನೆನಪಿನಲ್ಲಿ ಅನ್ನದಾನಕ್ಕೆ ಕೈ ಜೋಡಿಸಿದ್ದಾರೆ. ಮೊದಲ ದಿನ 15 ಸಾವಿರಕ್ಕೂ ಅಧಿಕ ಭಕ್ತರು ಇಲ್ಲಿ ಪ್ರಸಾದ ಭೋಜನ ಸ್ವೀಕರಿಸಿದ್ದಾರೆ. ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿಶೇಷ ಮೆರವಣಿಗೆ ಮತ್ತು ದೀಪೋತ್ಸವ:
ಡಿಸೆಂಬರ್ 27ರ ಶನಿವಾರ ಸಾಯಂಕಾಲ 7 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಲಿದೆ. ಈ ವೇಳೆ ಭಕ್ತಿಪೂರ್ವಕವಾಗಿ `41 ದೀಪೋತ್ಸವ’ ಜರುಗಲಿದ್ದು, ಶಿರಸಿಯಪ್ರೇಮಾ ಮತ್ತು ಗೋವಿಂದ ನೀಲೇಕಣಿ ದಂಪತಿ ಇದನ್ನು ಉದ್ಘಾಟಿಸಲಿದ್ದಾರೆ. ಡಿಸೆಂಬರ್ 28ರ ರವಿವಾರ ಸಂಜೆ ಅಯ್ಯಪ್ಪ ನಗರದಲ್ಲಿ ಪಲ್ಲಕ್ಕಿ ಉತ್ಸವದೊಂದಿಗೆ ಮಂಡಳ ಉತ್ಸವ ಸಂಪನ್ನಗೊಳ್ಳಲಿದೆ.
ಗುರುಸ್ವಾಮಿಗಳಾದ ಸಂದೀಪ ಎಂ ಸಿರಸಿಕರ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಅನೇಕರು ಈ ಪುಣ್ಯ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಸೇವಾ ಸಮಿತಿ ಅಧ್ಯಕ್ಷ ಅರುಣ ಪ್ರಭು ಈ ಕಾರ್ಯಕ್ರಮದ ಉಸ್ತುವಾರಿವಹಿಸಿದ್ದಾರೆ.