ಶಿರಸಿ ನಟರಾಜ ರಸ್ತೆಯಲ್ಲಿರುವ `ಶ್ರೀ ದುರ್ಗಾ ಜ್ಯುವೆಲರಿ ವರ್ಕ’ ಮಳಿಗೆಗೆ ಕಳ್ಳರು ನುಗ್ಗಿದ್ದಾರೆ. `ಅದು ತೋರಿಸಿ.. ಇದು ತೋರಿಸಿ’ ಎಂದು ರಾಜೇಶ ಶೇಟ್ ಅವರನ್ನು ಮರಳು ಮಾಡಿ 13 ಲಕ್ಷ ರೂ ಮೌಲ್ಯದ ಒಡವೆ ದೋಚಿದ್ದಾರೆ.
Advertisement. Scroll to continue reading.
ಶಿರಸಿಯ ದೇವಿಕೆರೆ ಪಡ್ತಿಗಲ್ಲಿಯಲ್ಲಿ ರಾಜೇಶ ಗಣಪತಿ ಶೇಟ್ ಅವರು ವಾಸವಾಗಿದ್ದಾರೆ. ಅವರು ಅಕ್ಕಸಾಲಿಗರಾಗಿದ್ದು, ಚಿನ್ನಾಭರಣಗಳನ್ನು ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಕಳೆದ 21 ವರ್ಷಗಳಿಂದ ರಾಜೇಶ ಶೇಟ್ ಅವರು ಶಿರಸಿ ನಟರಾಜ ರಸ್ತೆಯ ಚಿಲುಮೆಕೆರೆ ಎದುರು ಜ್ಯುವೆಲರಿ ಮಳಿಗೆ ನಡೆಸುತ್ತಿದ್ದಾರೆ. `ಶ್ರೀ ದುರ್ಗಾ ಜ್ಯುವೆಲರಿ ವರ್ಕ’ ಎಂಬ ಮಳಿಗೆಹೊಂದಿರುವ ರಾಜೇಶ ಶೇಟ್ ಅವರು ಅಲ್ಲಿ ಬಗೆ ಬಗೆಯ ಚಿನ್ನಾಭರಣಗಳನ್ನು ಇರಿಸಿದ್ದಾರೆ. ಆ ಚಿನ್ನಾಭರಣಗಳನ್ನು ನೋಡಿದ ಮೂವರು ಮಹಿಳೆಯರು ಮಾತಿನ ಮೋಡಿ ಮಾಡಿ ರಾಜೇಶ ಶೇಟ್ ಅವರಿಗೆ ಮೋಸ ಮಾಡಿದ್ದಾರೆ.
ಡಿಸೆಂಬರ್ 16ರಂದು ರಾಜೇಶ ಶೇಟ್ ಅವರು ಎಂದಿನAತೆ ಅಂಗಡಿ ತೆಗೆದು ವ್ಯವಹಾರ ಮಾಡಿಕೊಂಡಿದ್ದರು. ಸಂಜೆ 5 ಗಂಟೆಗೆ ಬುರ್ಕಾ ಧರಿಸಿದ ಮೂವರು ಅವರ ಅಂಗಡಿಗೆ ಬಂದರು. ಅವರೆಲ್ಲರೂ ಚನ್ನಾಗಿ ಮಾತನಾಡಿದ್ದರಿಂದ ರಾಜೇಶ ಶೇಟ್ ಅವರು ಮರುಳಾದರು. ಬಂಗಾರದ ಆಭರಣ ತೋರಿಸುವಂತೆ ಅವರು ಹೇಳಿದ ಪ್ರಕಾರ ಬಗೆ ಬಗೆಯ ಆಭರಣಗಳನ್ನು ಪ್ರದರ್ಶಿಸಿದರು. `ಚುಮುಕಿ ತೋರಿಸಿ, ಬಳೆ ತೋರಿಸಿ’ ಎಂದು ನಯವಾಗಿ ಮಾತನಾಡುತ್ತಿದ್ದ ಆ ಮಹಿಳೆಯರು ರಾಜೇಶ ಶೇಟ್ ಅವರ ಗಮನವನ್ನು ಬೇರೆ ಬೇರೆ ಕಡೆ ಸೆಳೆದರು.
ರಾಜೇಶ್ ಶೇಟ್ ಅವರಿಗೆ ಅರಿವಿಗೆ ಬಾರದಂತೆ ಅಲ್ಲಿದ್ದ ಬಂಗಾರದ ಆಭರಣಗಳನ್ನು ಅವರು ಅಪಹರಿಸಿದರು. ಒಟ್ಟು 13,38000ರೂ ಮೌಲ್ಯದ ಒಡವೆ ಕಾಣೆಯಾದ ಬಗ್ಗೆ ಆ ನಂತರ ರಾಜೇಶ ಶೇಟ್ ಅವರಿಗೆ ಅರಿವಾಯಿತು. ಬುರ್ಕಾ ಧರಿಸಿ ಬಂದಿದ್ದ ಮಹಿಳೆಯರ ಮಾತಿಗೆ ಮರುಳಾದ ಕಾರಣ ಆದ ನಷ್ಟ ಅರಿತ ಅವರು ತಮಗಾದ ಅನ್ಯಾಯದ ಬಗ್ಗೆ ಪೊಲೀಸರ ಮೊರೆ ಹೋದರು. ಹೆಸರು-ವಿಳಾಸ ಗೊತ್ತಿಲ್ಲದ ಬುರ್ಕಾದಾರಿ ಮಹಿಳೆಯರ ವಿರುದ್ಧ ಅವರು ಪೊಲೀಸ್ ದೂರು ನೀಡಿದರು. ಶಿರಸಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಆ ಅಪರಿಚಿತ ಮಹಿಳೆಯರ ಹುಡುಕಾಟ ನಡೆಸಿದ್ದಾರೆ.