ಯಲ್ಲಾಪುರ ಪಟ್ಟಣ ಪಂಚಾಯತದ ಮಾರುಕಟ್ಟೆ ಶುಲ್ಕ ವಸೂಲಿಗೆ ಮಂಗಳವಾರ ಟೆಂಡರ್ ನಡೆದಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಪ ಪಂ ಮಾಜಿ ಸದಸ್ಯರಿಬ್ಬರು ಹಸ್ತಕ್ಷೇಪ ಮಾಡಿದ ಆರೋಪವ್ಯಕ್ತವಾಗಿದೆ.
ಪಟ್ಟಣದ ಬೀದಿ ಬೀದಿ ವ್ಯಾಪಾರಿಗಳಿಂದ ಶುಲ್ಕ ವಸೂಲಿಗಾಗಿ ಪಟ್ಟಣ ಪಂಚಾಯತ ಟೆಂಡರ್ ಕರೆಯುತ್ತದೆ. ನಿಗದಿತ ಶುಲ್ಕ ವಸೂಲಿಗಾಗಿ ಅನೇಕರು ಪೈಪೋಟಿ ನೀಡುತ್ತಾರೆ. ಅದರಂತೆ ಮಂಗಳವಾರ ಈ ಶುಲ್ಕ ವಸೂಲಾತಿಗೆ ಟೆಂಡರ್ ಕರೆಯಲಾಗಿದ್ದು, ಆ ಅವಧಿಯಲ್ಲಿ ಪಟ್ಟಣ ಪಂಚಾಯತದ ಮಾಜಿ ಸದಸ್ಯರಿಬ್ಬರು ಹಸ್ತಕ್ಷೇಪ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.
ಸದ್ಯ ಪಟ್ಟಣ ಪಂಚಾಯತದ ಜನಪ್ರತಿನಿಧಿಗಳ ಆಡಳಿತ ಅವಧಿ ಮುಕ್ತಾಯವಾಗಿದ್ದು, ತಹಶೀಲ್ದಾರ್ ಆಡಳಿತಾಧಿಕಾರಿಯಾಗಿದ್ದಾರೆ. ಹೀಗಿದ್ದರೂ `ಟೆಂಡರ್ ಪ್ರಕ್ರಿಯೆ ನಡೆಯುವಾಗ ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಬ್ದುಲ್ ಅಲಿ ಹಾಗೂ ಮಾಜಿ ಸದಸ್ಯ ಸತೀಶ ನಾಯ್ಕ ಅವರು ಅಲ್ಲಿ ಆಸನರಾಗಿದ್ದರು. ಅವರಿಬ್ಬರು ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಜಯ ಮರಾಠಾ ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಸುಜಯ ಮರಾಠಾ ಅವರು ತಹಶೀಲ್ದಾರ್ ಚಂದ್ರಶೇಖರ ಹೊಸ್ಮನಿ ಅವರಿಗೆ ಮೌಖಿಕ ದೂರು ನೀಡಿದ್ದಾರೆ. ಟೆಂಡರ್ ಪ್ರಕ್ರಿಯೆಯ ವಿಡಿಯೋ ಚಿತ್ರಿಕರಣವನ್ನು ಗಮನಿಸಿ ಕ್ರಮ ಜರುಗಿಸುವುದಾಗಿ ಚಂದ್ರಶೇಖರ್ ಹೊಸ್ಮನಿ ಅವರು ಭರವಸೆ ನೀಡಿದ್ದಾರೆ. `ಪಟ್ಟಣ ಪಂಚಾಯತ ಮಾರುಕಟ್ಟೆ ಕರ ವಸೂಲಿ ಟೆಂಡರ್ ಪಾರದರ್ಶಕವಾಗಿ ನಡೆಯಬೇಕು. ಇದಕ್ಕಾಗಿ ಮರು ಟೆಂಡರ್ ಕರೆಯಬೇಕು’ ಎಂದು ಸುಜಯ ಮರಾಠಾ ಅವರು ಆಗ್ರಹಿಸಿದ್ದಾರೆ.