`ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು, ಈ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ಅವರು ಮಾತನಾಡುತ್ತಿಲ್ಲ. ಅಕ್ರಮ ಮದ್ಯದಿಂದ ಆದಾಯ ಬರುವ ಕಾರಣ ಅವರು ಮೌನವಾಗಿದ್ದಾರೆ’ ಎಂಬ ಅರ್ಥದಲ್ಲಿ ಜೆಡಿಎಸ್ ಮುಖಂಡ ಉಪೇಂದ್ರ ಪೈ ಹೇಳಿಕೆ ನೀಡಿದ್ದಾರೆ!
`ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಬಡ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ನಿಂತಿಲ್ಲ. 30 ವರ್ಷ ಹಿಂದಿನ ಅಡಿಕೆ ಮರಗಳ ನಾಶ ನಡೆದರೂ ಶಾಸಕ ಭೀಮಣ್ಣ ನಾಯ್ಕ ಅವರು ಮಾತನಾಡುತ್ತಿಲ್ಲ’ ಎಂದು ಉಪೇಂದ್ರ ಪೈ ಅವರು ಅಸಮಧಾನಹೊರಹಾಕಿದ್ದಾರೆ. `ಪ್ರತಿ ದಿನ ಸಂಜೆ 6 ಗಂಟೆ ನಂತರ ಅಕ್ರಮ ಮದ್ಯ ಸರಬರಾಜು ಹೆಚ್ಚಾಗುತ್ತಿದೆ. ಕಂಡ ಕಂಡ ಹೊಟೇಲುಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಮದ್ಯದ ಹೊಳೆಯೇ ಹರಿಯುತ್ತಿದ್ದರೂ ಶಾಸಕರು ಗಮನಹರಿಸಿಲ್ಲ. ಅಕ್ರಮ ಮದ್ಯ ಮಾರಾಟ ತಡೆಗೂ ಮುಂದಾಗಿಲ್ಲ. ಇದರಿಂದ ಹೇಗೂ ಆದಾಯ ಬರುತ್ತದೆ ಎಂಬ ನಿಟ್ಟಿನಲ್ಲಿ ಅವರು ಕಣ್ಮುಚ್ಚಿ ಕುಳಿತಿರುವ ಹಾಗೇ ಭಾಸವಾಗುತ್ತಿದೆ’ ಎಂದು ಉಪೇಂದ್ರ ಪೈ ಅವರು ಹೇಳಿದ್ದಾರೆ.
`ಕಳೆದ ಜಾತ್ರೆ ಅವಧಿಯಲ್ಲಿ 5 ಕೋಟಿ ರೂ ಹಣ ಬಂದ ಬಗ್ಗೆ ಹೇಳಿದ್ದರು. ಆದರೆ, ಆ ಹಣದ ಬಗ್ಗೆ ಈಗ ಪ್ರಶ್ನಿಸಿದರೆ ಉತ್ತರವಿಲ್ಲ. ಶಾಸಕರು ಗುದ್ದಲಿ ಪೂಜೆಗೆ ಮಾತ್ರ ಸೀಮಿತವಾಗಿದ್ದು, ಅಭಿವೃದ್ಧಿ ಕೆಲಸ ಒಂದೂ ಆಗುತ್ತಿಲ್ಲ. ಹೀಗಿರುವಾಗ ಈ ಜಾತ್ರೆಗಾದರೂ ಶಾಸಕರು ಎಷ್ಟು ಹಣ ತರುತ್ತಾರೆ? ಅದನ್ನು ಹೇಗೆ ಬಳಸುತ್ತಾರೆ? ಎಂದು ಮಾಹಿತಿ ಕೊಡಬೇಕು’ ಎಂದವರು ಆಗ್ರಹಿಸಿದ್ದಾರೆ. `ಮೊನ್ನೆಯೂ ಶಾಸಕರ ಪಟಾಲಂಗರು ಪತ್ರಿಕೆ ಮೂಲಕ ಸುಳ್ಳು ಘೋಷಣೆ ಕೊಟ್ಟಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷರ ವರ್ತನೆಯನ್ನು ನೋಡಿದ್ದು, ಈ ಕ್ಷೇತ್ರದಲ್ಲಿ ಗೂಂಡಾಗಿರಿ ನಡೆಯುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. `ನಗರಸಭೆಯ ಬಗ್ಗೆ ಮಾತನಾಡಿದಾಗ ಅಲ್ಲಿನ ಸದಸ್ಯರು ಆಕ್ಷೇಪವ್ಯಕ್ತಪಡಿಸಿದ್ದರು. ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಆದರೆ, ಅದಾದ ನಂತರ ಇದೇ ನಗರಸಭೆಯ ಭ್ರಷ್ಟಾಚಾರ, ಲಂಚದ ಆರೋಪಗಳು ಬೆಳಕಿಗೆ ಬಂದಿದೆ’ ಎಂದು ಹಳೆಯ ವಿಷಯವನ್ನು ನೆನಪಿಸಿದ್ದಾರೆ.