ಯಲ್ಲಾಪುರದ ರಂಜಿತಾ ಅವರನ್ನು ಕೊಲೆ ಮಾಡಿದ ರಫೀಕ್ ಕಾಡಿನ ಕಡೆ ಓಡಿದ್ದು, ಶನಿವಾರ ರಾತ್ರಿಯಿಡೀ ಪೊಲೀಸರು ಕಾಡು ಸುತ್ತಿದರೂ ಆರೋಪಿ ಸುಳಿವು ಸಿಕ್ಕಿರಲಿಲ್ಲ. ಭಾನುವಾರ ಬೆಳಗ್ಗೆ ಕಾರ್ಯಾಚರಣೆಗಿಳಿದ ಅಖೇರಾ ಎಂಬ ಶ್ವಾನ ಒಂದುವರೆ ತಾಸಿನೊಳಗೆ ರಫೀಕ್ ಇದ್ದ ಸ್ಥಳ ಪತ್ತೆ ಮಾಡಿದೆ.
ಎರಡುವರೆ ವರ್ಷದ ಹಿಂದೆ ಅಖೀರಾ ಎಂಬ ಶ್ವಾನ ಪೊಲೀಸ್ ಇಲಾಖೆಯನ್ನು ಸೇರಿತು. ಕಾಳಿ ಎಂಬ ಶ್ವಾನಕ್ಕೆ ತರಬೇತಿ ನೀಡಿ ಪಳಗಿಸಿದ್ದ ಪೊಲೀಸ್ ಸಿಬ್ಬಂದಿ ಗೋಪಾಲಕೃಷ್ಣ ನಾಯ್ಕ ಅವರು ಅಖೀರಾ ಅವರಿಗೆ ತರಬೇತಿ ಶುರು ಮಾಡಿದ್ದರು. ಅತ್ಯಂತ ಚುರುಕು ಸ್ವಭಾವದ ಈ ಶ್ವಾನ ಬಹುಬೇಗ ತನಿಖಾ ವಿದ್ಯೆ ಕಲಿತಿದ್ದು, ಅನೇಕ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ನೆರವಾಗಿದೆ.
ಕರಾವಳಿ ಉತ್ಸವದ ಅವಧಿಯಲ್ಲಿಯೂ ಅಖೀರಾ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅಖೀರಾ ಮಾಡಿದ ಸಾಹಸಗಳನ್ನು ಜನ ಕಣ್ತುಂಬಿಕೊoಡಿದ್ದರು. ಆ ಅವಧಿಯಲ್ಲಿ ಅಖೀರಾವನ್ನು ಒಳಗೊಂಡ ಶ್ವಾನದಳಕ್ಕೆ ಪೊಲೀಸ್ ಅಧೀಕ್ಷಕರು 10 ಸಾವಿರ ರೂ ಬಹುಮಾನ ನೀಡಿದ್ದರು. ರಂಜೀತಾ ಕೊಲೆ ಪ್ರಕರಣ ಗಂಭೀರ ಸ್ವರೂಪಪಡೆದಿದ್ದರಿಂದ ಈ ಕಾರ್ಯಾಚರಣೆಗೆ ಅಖೀರಾ ನೆರವುಪಡೆಯಲು ನಿರ್ಧರಿಸಲಾಗಿತ್ತು.
ಆರೋಪಿ ರಫೀಕ್ ಆನಗೋಡು ಭಾಗದ ಅರಣ್ಯ ಪ್ರದೇಶಕ್ಕೆ ಹೋದ ಬಗ್ಗೆ ಮಾಹಿತಿಯಿತ್ತು. ಆದರೆ, ಎಲ್ಲಿ ಅವಿತಿದ್ದಾರೆ? ಎಂದು ಗೊತ್ತಾಗಿರಲಿಲ್ಲ. ಹೀಗಾಗಿ ಯಲ್ಲಾಪುರದಲ್ಲಿ ನಡೆದ ರಂಜಿತಾ ಕೊಲೆ ಪ್ರಕರಣರದಲ್ಲಿಯೂ ಆರೋಪಿ ರಫೀಕ್ ಹುಡುಕಾಟಕ್ಕೆ ಅಖೀರಾ ಆಗಮಿಸಿದ್ದು ಕಾರ್ಯಾಚರಣೆ ನಡೆಸದ ಒಂದುವರೆ ತಾಸಿನಲ್ಲಿ ರಫೀಕ್ ಸುಳಿವು ಸಿಕ್ಕಿತು. ಆದರೆ, ಪೊಲೀಸರು ಕಾಜುವಾಡದ ಅರಣ್ಯ ಪ್ರದೇಶಕ್ಕೆ ಹೋಗುವಷ್ಟರೊಳಗೆ ರಫೀಕ್ ಶವವಾಗಿದ್ದರು.